ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡ: ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ

“ಕುಮಾರಸ್ವಾಮಿ ಯಾರು? Who is kumaraswmay. ಡಿ.ಕೆ. ಶಿವಕುಮಾರ್ ಸಿಎಂ ಆಗಿರುವುದನ್ನು ಒಪ್ಪದಿರುವುದಕ್ಕೆ ಅವರು ಯಾರು? ಅವರಿಗೂ ಇದಕ್ಕೂ ಏನು ಸಂಬಂಧ?” ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದನ್ನು ಎಚ್.ಡಿ. ಕುಮಾರಸ್ವಾಮಿ ಅವರು ಒಪ್ಪುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಕುಮಾರಸ್ವಾಮಿ ಯಾರು? ಅವರು ಕೇಂದ್ರ ಸಚಿವರು, ಅವರ ಕೆಲಸ ಅವರು ಮಾಡಲಿ. ಅದನ್ನು ಬಿಟ್ಟು ಹೀಗೆ ಮಾತನಾಡಲು ಅವರಿಗೆ ತಲೆ ಕೆಟ್ಟಿರಬೇಕು” ಎಂದರು.

“ಸ್ಟಿಂಗ್ ಆಪರೇಷನ್ ಅನ್ನು ಜನತಾದಳದವರನ್ನು ಬಿಟ್ಟು ಇನ್ಯಾರು ಮಾಡಲು ಸಾಧ್ಯ? ಅವರ ಸೋಷಿಯಲ್ ಮೀಡಿಯಾ ಪೇಜ್‌ನಿಂದಲೇ ಸಿದ್ದರಾಮಯ್ಯ ಅವರ ಮೇಲೆ ಸ್ಟಿಂಗ್ ನಡೆಸಲಾಗಿದೆ ಎಂಬ ವಿಡಿಯೋ ಹರಿದಾಡುತ್ತಿದೆ. ಹೀಗಾಗಿ ವಿಡಿಯೋ ಹರಿಬಿಟ್ಟ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ” ಇದರಲ್ಲಿ ತಪ್ಪೆನಿದೆ ಎಂದರು.

“ಯಾವುದೋ ಹಳೆ ವಿಡಿಯೋ ಎನ್ನಲಾಗುತ್ತಿರುವ ದೃಶ್ಯ ಈಗ ಬಿಡುಗಡೆಯಾಗಲು ಕಾರಣವೇನು? ಯಾವುದೇ ಕಾರಣಕ್ಕೂ ಕಾನೂನು ಮೀರಿ, ಮುಜುಗರ ಉಂಟುಮಾಡುವ ತಪ್ಪನ್ನು ಸಿದ್ದರಾಮಯ್ಯ ಅವರು ಮಾಡುವುದಿಲ್ಲ. ಇಡೀ ಕಾಂಗ್ರೆಸ್ ಇಂತಹ ಕೆಲಸಗಳನ್ನು ಮಾಡುವುದಿಲ್ಲ. ಈ ಸ್ಟಿಂಗ್ ಬಗ್ಗೆ ಪ್ರಧಾನಿ ಮೋದಿ ಅವರೊಟ್ಟಿಗೆ ಮಾತನಾಡಿ, ಕುಮಾರಸ್ವಾಮಿ ಅವರೇ ತನಿಖಾ ಸಂಸ್ಥೆಗಳಿಗೆ ಒಪ್ಪಿಸಲಿ” ಎಂದು ಸವಾಲೆಸೆದರು.

“ಇಲ್ಲಿಯವರೆಗೂ ಇಲ್ಲದ ಅನುಕಂಪ, ಅಕ್ಕರೆ ಇದೀಗ ಸಿದ್ದರಾಮಯ್ಯ ಅವರ ಮೇಲೆ ಹುಟ್ಟಲು ಕುಮಾರಸ್ವಾಮಿ ಅವರಿಗೆ ಹೇಗೆ ಸಾಧ್ಯ? ಮಗು ಚಿವುಟಿ, ತೊಟ್ಟಿಲು ತೂಗುವ ನಾಟಕವಾಡುವುದು ಅವರೇ” ಎಂದು ಆರೋಪಿಸಿದ ಸಚಿವರು, “ಹಾಸನದ ಪೆನ್ ಡ್ರೈವ್ ವಿಚಾರದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮಾತ್ರ ಅನ್ಯಾಯವಾಗಿದೆ ಎನ್ನುವ ಎಚ್‌ಡಿಕೆಗೆ, ಸಂತ್ರಸ್ತರಾದ ನೂರಾರು ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ” ಎಂದರು.

Leave a Reply

Your email address will not be published. Required fields are marked *

error: Content is protected !!