ದೊಡ್ಡಬಳ್ಳಾಪುರ: ಹುಟ್ಟುಹಬ್ಬವನ್ನು ವೈಯಕ್ತಿಕ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಆಚರಿಸಿದಾಗ ಅದಕ್ಕೆ ವಿಶೇಷ ಅರ್ಥ ಬರುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ. ಲಕ್ಷ್ಮೀಪತಿ ಹೇಳಿದರು.
ತಾಲೂಕಿನ ಕೊನಘಟ್ಟದಲ್ಲಿ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರದ ಕೊನಘಟ್ಟ ಲೆಜೆಂಡ್ಸ್ ವಿಭಾಗ ಹಾಗೂ ಭೋದಿ ವೃಕ್ಷ ಎಜುಕೇಷನಲ್ ಸೋಶಿಯಲ್ ಚಾರಿಟೇಬಲ್ ಟ್ರಸ್ಟ್‌ನ ಸಂಯುಕ್ತಾಶ್ರಯದಲ್ಲಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಸೇವಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿವರ್ಷ ತಮ್ಮ ಹುಟ್ಟುಹಬ್ಬದಂದು ವಿವಿಧ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯೂ ತಾಲೂಕಿನ ಹಲವು ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಗಿದೆ. ರೋಗಿಗಳಿಗೆ ಅಭಿಮಾನಿಗಳು ಹಾಲು ಮತ್ತು ಹಣ್ಣುಗಳನ್ನು ವಿತರಿಸಿದ್ದಾರೆ. ಇಂತಹ ಸೇವಾ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಿಸುವುದು ಸಂತಸ ನೀಡುತ್ತದೆ ಎಂದರು.
ಜಿ. ಲಕ್ಷ್ಮೀಪತಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೊನಘಟ್ಟದಲ್ಲಿ ಅಭಿಮಾನಿಗಳು ವಿವಿಧ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಗಣ್ಯರು ಹಾಗೂ ಅಭಿಮಾನಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಟಿ. ವೆಂಕಟರಮಣಯ್ಯ, ಡಿಪಿಎ ಸದಸ್ಯರಾದ ಮುನಿರಾಜು ಮತ್ತು ಕೃಷ್ಣಮೂರ್ತಿ, ಡಿಪಿಎ ಮಾಜಿ ಅಧ್ಯಕ್ಷ ಚುಂಚೇಗೌಡ, ಟಿಎಪಿಎಂಸಿಎಸ್ ಅಧ್ಯಕ್ಷ ಸಿದ್ದರಾಮಯ್ಯ, ಮುಖಂಡರಾದ ವಿಶ್ವಾಸ ಹನುಮಂತೇಗೌಡ, ವೆಂಕಟೇಶ್, ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
