
ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬ್ಯಾಡರಹಳ್ಳಿ ಗೇಟ್ ಬಳಿ ನಡೆದಿದೆ.
ದೊಡ್ಡಬಳ್ಳಾಪುರ–ದೇವನಹಳ್ಳಿ ಎಸ್ಟಿಆರ್ಆರ್ ರಸ್ತೆಯಲ್ಲಿ ತಡರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾಶೆಟ್ಟಿಹಳ್ಳಿ ನಿವಾಸಿಗಳಾದ ಧನುಷ್ (20) ಮತ್ತು ಚೇತನ್ (24) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರೂ ಬಜರಂಗದಳದ ಕಾರ್ಯಕರ್ತರಾಗಿದ್ದು, ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಬಳಿಕ ಡಿಕ್ಕಿ ಹೊಡೆದ ವಾಹನದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಘಟನೆ ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದೇ ವೇಳೆ, ಅನಾರೋಗ್ಯದಿಂದ ಬಜರಂಗದಳದ ಮತ್ತೊಬ್ಬ ಕಾರ್ಯಕರ್ತ ಕಛೇರಿಪಾಳ್ಯ ನಿವಾಸಿ ಅಶೋಕ್ (34) ಕೂಡ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಒಂದೇ ದಿನ ಪ್ರತ್ಯೇಕ ಘಟನೆಗಳಲ್ಲಿ ಮೂವರು ಕಾರ್ಯಕರ್ತರು ಮೃತಪಟ್ಟಿರುವುದು ಸಂಘಟನೆಯ ಕಾರ್ಯಕರ್ತರು ಹಾಗೂ ಕುಟುಂಬಸ್ಥರಲ್ಲಿ ದುಃಖಕ್ಕೆ ಕಾರಣವಾಗಿದೆ.