
ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು…….
” ಜೈ ಜವಾನ್ ಜೈ ಕಿಸಾನ್ ” ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಬಲವಾದ ಬುನಾದಿಯನ್ನು ಮುಂದುವರಿಸಿದ ರಾಜಕೀಯ ಆದರ್ಶ ವ್ಯಕ್ತಿ ಶಾಸ್ತ್ರಿಯವರು. ಗಾಂಧಿ ಯುಗದ ಮುಂದುವರಿದ ಭಾಗ ಇವರು. ಬಹುಶಃ ರಷ್ಯಾದ ತಾಷ್ಕೆಂಟ್ ನಲ್ಲಿ ಪಾಕಿಸ್ತಾನದ ಜೊತೆ ಒಪ್ಪಂದದ ಸಮಯದಲ್ಲಿ ತೀವ್ರ ಚಳಿಯಿಂದ ಹೃದಯಾಘಾತ ಸಂಭವಿಸದೇ ಮತ್ತಷ್ಟು ವರ್ಷ ಆಡಳಿತ ನಡೆಸಿದ್ದರೆ ಭಾರತದ ಅಭಿವೃದ್ಧಿಯ ವೇಗ ಮತ್ತಷ್ಟು ತೀವ್ರವಾಗಿರುತ್ತಿತ್ತು ಎಂದು ಖಚಿತವಾಗಿ ಹೇಳುವಷ್ಟು ದಕ್ಷ ಆಡಳಿತಗಾರರಾಗಿದ್ದರು ಲಾಲ್ ಬಹಾದ್ದೂರ್ ಶಾಸ್ತ್ರಿ…..
ಇಂದಿನ ರಾಜಕಾರಣಿಗಳು ಅವರ ಜೀವನಶೈಲಿಯಿಂದ ಕನಿಷ್ಠ ಪ್ರಮಾಣದ ಸ್ಪೂರ್ತಿ ಮತ್ತು ಪ್ರಾಮಾಣಿಕತೆಯನ್ನಾದರು ಕೇಳಿ ತಿಳಿದುಕೊಂಡು ಹಾಗೆ ನಡೆಯಲಿ ಎಂದು ಆಶಿಸುತ್ತಾ………
ಆಗಿನ ಸಮಯದಲ್ಲಿ ನೆಹರು ನಂತರ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಆಯ್ಕೆಯಾದ ಪರಿಸ್ಥಿತಿ ಮತ್ತು ಅಂದಿನ ಮೌಲ್ಯಯುತ ರಾಜಕೀಯ ವ್ಯವಸ್ಥೆಯ ಬಗ್ಗೆ ಆಶ್ಚರ್ಯ ಮತ್ತು ಪ್ರಶಂಸೆ ವ್ಯಕ್ತಪಡಿಸುತ್ತಾ……..
ಮತ್ತೆ ಮಹಾತ್ಮನ ಬಗ್ಗೆ ಎರಡು ಮಾತು…….
ಗಾಂಧಿ……
ಗುಜರಾತಿನ ಪೋರಬಂದರ್ ನ ಸಾಮಾನ್ಯ ಶಿಶು,
ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿ,
ಇಂಗ್ಲೇಂಡಿನಲ್ಲಿ ಕಾನೂನು ಶಿಕ್ಷಣ ಪಡೆಯಲು ಹೊರಟ ಕನಸುಗಣ್ಣಿನ ಯುವಕ,
ಅಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಹಿಂತಿರುಗಿದ ಕುಟುಂಬದ ಹೆಮ್ಮೆಯ ಪುತ್ರ,
ಆಕಸ್ಮಿಕವಾಗಿ ದೊರೆತ ಅವಕಾಶದಿಂದ ದಕ್ಷಿಣ ಆಫ್ರಿಕಾದಲ್ಲಿ ವಾದ ಮಂಡಿಸಲು ಹೊರಟ ವಕೀಲ,
ವಕೀಲಿ ವೃತ್ತಿಯಲ್ಲಿ ಅನಿವಾರ್ಯವಾಗಿ ತಮ್ಮ ಕಕ್ಷೀದಾರರನ್ನು ಸಮರ್ಥಿಸಲು ಸುಳ್ಳು ಹೇಳಬೇಕಾದ ಮುಜುಗರ ತಪ್ಪಿಸಿಕೊಳ್ಳಲು ಆತ್ಮವಿಮರ್ಶೆ ಮಾಡಿಕೊಂಡು ಆ ವೃತ್ತಿಯ ಬಗ್ಗೆ ನಿರಾಸಕ್ತಿ ಬೆಳೆಸಿಕೊಂಡ ಅದರಿಂದ ಮುಕ್ತನಾದ ಪ್ರಾಮಾಣಿಕ,
ದಕ್ಷಿಣ ಆಫ್ರಿಕಾದಲ್ಲಿ ಆದ ಅನಿರೀಕ್ಷಿತ, ಅವಮಾನಕರ ಘಟನೆಗಳಿಂದ ಸ್ವಾಭಿಮಾನ ಜಾಗೃತವಾಗಿ ಮೂಲಭೂತ ಅವಶ್ಯಕತೆಗಳಿಗಾಗಿ, ಹಕ್ಕುಗಳಿಗಾಗಿ ಪ್ರತಿಭಟನೆ ಮಾಡಿದ ಬಂಡಾಯಗಾರ,
ಅದಕ್ಕಾಗಿ ಆಗಿನ ಆಡಳಿತದೊಂದಿಗೆ ಪತ್ರ ವ್ಯವಹಾರ, ಕಾನೂನು ಸಮರ, ಚರ್ಚೆ, ಪತ್ರಿಕಾ ಲೇಖನ, ಮುಷ್ಕರ ರೂಪಿಸಿದ ಮಾನವೀಯ ಕಾಳಜಿಯ ಶ್ರಮಜೀವಿ,
ತನ್ನ ಆ ಹೋರಾಟದಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಪಡೆದು ಸಾರ್ವಜನಿಕ ವಲಯದಲ್ಲಿ ಜನಪ್ರಿಯರಾಗಿ ಪ್ರಸಿದ್ಧರಾದ ಚಳವಳಿಗಾರ,
ಆ ಜನಪ್ರಿಯತೆ, ಸಂವಹನ ಕಲೆ, ಬ್ರಿಟಿಷ್ ಆಡಳಿತದೊಂದಿಗೆ ಸಂಪರ್ಕ ಸಾಧಿಸಿದ ವಿಧಾನ ಎಲ್ಲದರಗಳಿಂದ ಭಾರತದ ಆಗಿನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭರವಸೆ ಮೂಡಿಸಿ ಇಲ್ಲಿನ ಚಳುವಳಿಯಲ್ಲಿ ಭಾಗವಹಿಸಲು ಆಹ್ವಾನ ಪಡೆದ ನಾಯಕ,
ಭಾರತಕ್ಕೆ ಬಂದು ನೇರ ಹೋರಾಟದಲ್ಲಿ ಭಾಗಿಯಾಗದೆ ಇಡೀ ಭಾರತವನ್ನು ತೃತೀಯ ದರ್ಜೆ ರೈಲಿನಲ್ಲಿ ಪ್ರಯಾಣಿಸಿ ಇಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಜನಜೀವನ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ ಅಧ್ಯಯನಕಾರ,
ಭಾರತದ ಶಕ್ತಿ ಸಾಮರ್ಥ್ಯ, ದೌರ್ಬಲ್ಯ, ಸಾಮಾಜಿಕ ರಚನೆಯ ವಿಭಜನಾತ್ಮಕ ಗುಣ, ಇಲ್ಲಿನ ಮೌಲ್ಯಗಳು, ಜಾತಿ, ಧರ್ಮ, ಆರ್ಥಿಕ ಅಸಮಾನತೆ ಎಲ್ಲವನ್ನು ಅಭ್ಯಸಿಸಿ ಸ್ವಾತಂತ್ರ ಚಳುವಳಿಯ ರೂಪರೇಷೆಗಳನ್ನು ಮನಸ್ಸಿನಲ್ಲಿ ಸ್ಪಷ್ಟ ಪಡಿಸಿಕೊಂಡ ಯೋಚನಾಕಾರ,
ಸ್ಪಷ್ಟವಾದ ಗುರಿಯೊಂದಿಗೆ ಭಾರತದ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಾ ಬೆಳೆದ ದೂರದೃಷ್ಟಿಯ ಹರಿಕಾರ,
ತಮ್ಮ ಹೋರಾಟದ ಅನುಭವದಲ್ಲೇ ಸತ್ಯ, ಅಹಿಂಸೆ, ಸರಳತೆ, ಸತ್ಯಾಗ್ರಹ, ಪ್ರಾಮಾಣಿಕತೆ ಇವುಗಳನ್ನೇ ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಸ್ತ್ರಗಳಾಗಿ ಉಪಯೋಗಿಸಿದ ಮಾನವತಾವಾದಿ,
ಅನೇಕ ಸಂಘರ್ಷ, ಆರೋಪ ಪ್ರತ್ಯಾರೋಪ, ವಾದ ವಿವಾದ, ಘರ್ಷಣೆ, ಸೋಲು ಗೆಲುವು, ಆಸೆ ನಿರಾಶಗಳ ನಡುವೆಯೂ ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಕ್ರಮಬದ್ಧಗೊಳಿಸಿ ಯಶಸ್ವಿಯಾದ ಮಹಾಪುರುಷ,
ಸ್ವಾತಂತ್ರ್ಯ ಗಳಿಸಿದ ಕೆಲವೇ ತಿಂಗಳುಗಳಲ್ಲಿ ಹಂತಕನ ಗುಂಡಿಗೆ ಬಲಿಯಾದ ಮಹಾತ್ಮ,
ನನ್ನ ಜೀವನವೇ ನನ್ನ ಸಂದೇಶ ಎಂದು ಸಾರಿದ ಧೀಮಂತ ವ್ಯಕ್ತಿತ್ವ,
ಯಾವುದೇ ಅಧಿಕಾರ ಹಣ ಅಂತಸ್ತುಗಳಿಗೆ ಶರಣಾಗದ, ಆಮಿಷಕ್ಕೊಳ್ಳಲಾಗದ ತ್ಯಾಗಜೀವಿ,
ಸೂಟು ಬೂಟಿನಿಂದ ಬರಿಮೈ ಫಕೀರನಾಗಿ ಬದಲಾದ ಸರಳ ಜೀವಿ,
ಸ್ವಾತಂತ್ರ್ಯ ನಂತರ ದೇಶದ ಉದ್ದಗಲಕ್ಕೂ ಮಹಾತ್ಮನಾಗಿ, ರಾಷ್ಟ್ರಪಿತನಾಗಿ ಅಜರಾಮರರಾದ ಆದರ್ಶ ವ್ಯಕ್ತಿ,
80ರ ದಶಕದ ಆರಂಭದಲ್ಲಿ ಗಾಂಧಿ ನಿಜವಾಗಲೂ ರಾಷ್ಟ್ರಪಿತನೇ, ಮಹಾತ್ಮನೇ ಎಂಬ ಹಿಂದಿನ ಚರ್ಚೆಯ ವಿಷಯ ಮತ್ತೆ ಮುನ್ನೆಲೆಗೆ ಬಂದ ಚರ್ಚಾಸ್ಪದ ವ್ಯಕ್ತಿ,
90ರ ದಶಕದ ಅಂತ್ಯದ ವೇಳೆಗೆ ಗಾಂಧಿ ಮಹಾತ್ಮನಲ್ಲ, ದೇಶ ವಿಭಜನೆಯ ದ್ರೋಹಿ ಎಂಬುದಾಗಿ ನಿಧಾನವಾಗಿ ಜನಮಾನಸದಲ್ಲಿ ಬೇರೂರ ತೊಡಗಿದ ವ್ಯಕ್ತಿ,
ನಿಧಾನವಾಗಿ ಯುವ ಜನತೆಯಲ್ಲಿ ಗಾಂಧಿ ತಾತನನ್ನು ಒಬ್ಬ ಹೇಡಿಯಂತೆ ಚಿತ್ರಿಸಿ ಹಾಸ್ಯಾಸ್ಪದ ವ್ಯಕ್ತಿಯಾದ ಗಾಂಧಿ,
ಹಾಗೆಯೇ ತದನಂತರದಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತದ್ದು ಗಾಂಧಿಯ ಅಹಿಂಸೆಯಿಂದಲೂ ಅಲ್ಲ, ಸತ್ಯಾಗ್ರಹದಿಂದಲೂ ಅಲ್ಲ, ಹೋರಾಟದಿಂದಲೂ ಅಲ್ಲ. ಅದೆಲ್ಲವೂ ಕಪಟ ನಾಟಕ. ಅವರೊಬ್ಬ ಬ್ರಿಟಿಷ್ ಏಜೆಂಟ್. ಶಸ್ತ್ರ ಮತ್ತು ಶಾಸ್ತ್ರದ ಬಲದಿಂದಲೇ ಸ್ವಾತಂತ್ರ್ಯ ಗಳಿಸಿದ್ದು ಎಂಬುದಾಗಿ ಚರ್ಚೆಗಳು ಸಾಮಾಜಿಕ ಜಾಲತಾಣಗಳ ಮುಖಾಂತರ, ಸಂಘ ಸಂಸ್ಥೆಗಳ ಮುಖಾಂತರ, ಕೆಲವು ಪತ್ರಿಕೆಗಳ ಮುಖಾಂತರ ಹರಡತೊಡಗಿ ಖಳನಾಯಕನಾದ ವ್ಯಕ್ತಿ,
ಗಾಂಧಿ ಒಬ್ಬ ಸನಾತನ ಧರ್ಮ ವ್ಯವಸ್ಥೆಯ ಪ್ರತಿಪಾದಕ, ವರ್ಣಾಶ್ರಮ ಧರ್ಮದಲ್ಲಿ ನಂಬಿಕೆ ಇದ್ದ ವ್ಯಕ್ತಿ, ಸ್ತ್ರೀ ಸ್ವಾತಂತ್ರ್ಯದ ವಿರೋಧಿ ಮುಂತಾದ ಗುಣ ವಿಶೇಷಗಳೊಂದಿಗೆ ಮಹಾತ್ಮನಲ್ಲ ದುರಾತ್ಮ ಎಂಬುದಾಗಿ ಬಿಂಬಿತವಾದ ವ್ಯಕ್ತಿ,
ದೇಶದಾದ್ಯಂತ ಪ್ರತಿಷ್ಠಾಪಿಸಲಾಗಿದ್ದ ಗಾಂಧಿಯ ಪ್ರತಿಮೆಗಳು ನಿಧಾನವಾಗಿ ಮರೆಯಾಗುತ್ತಾ, ಇತರರ ಪ್ರತಿಮೆಗಳು ಹೆಚ್ಚಾಗುತ್ತಾ ಜನರ ಮನಸ್ಸಿನಲ್ಲೂ ಮರೆಯಾಗುತ್ತಿರುವ ವ್ಯಕ್ತಿ,
ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದಲ್ಲಿ, ಅದೇ ವೇಗದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ, ನಾಶವಾಗುತ್ತಿರುವ ಸಂದರ್ಭದಲ್ಲಿ ಗಾಂಧಿ, ಗಾಂಧಿಯ ಮೌಲ್ಯಗಳು, ವ್ಯಕ್ತಿತ್ವ, ವಿಚಾರಗಳು ಸಹ ನಿಧಾನವಾಗಿ ಇಲ್ಲವಾಗುತ್ತಿರುವ ಸಂದರ್ಭದಲ್ಲಿ ಭಾರತ, ಭಾರತೀಯತೆ, ಭಾರತೀಯರು ಎತ್ತ ಸಾಗುತ್ತಿದ್ದಾರೆ. ಇವುಗಳಿಗೆ ಒಂದಕ್ಕೊಂದು ಸಂಬಂಧ ಇದೆಯೇ ಎಂಬುದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ,……
ಗಾಂಧಿಯನ್ನು ಮರೆತ ಭಾರತಕ್ಕೆ ಉತ್ತಮ ಆರೋಗ್ಯಕರ ಭವಿಷ್ಯ ಇಲ್ಲ ಎಂದು ನನ್ನ ವೈಯಕ್ತಿಕ ಷರಾ ಬರೆಯುತ್ತಾ…..
ಗಾಂಧಿ ನೈತಿಕವಾಗಿ ಈ ಜಗತ್ತಿಗೇ ಮಾದರಿ. ದುರಾದೃಷ್ಟವಶಾತ್ ಅವರನ್ನು ಅರ್ಥಮಾಡಿಕೊಳ್ಳುವ ನೈತಿಕ ಮನಸ್ಥಿತಿಯೇ ನಮ್ಮ ಬಹುತೇಕರಲ್ಲಿ ಇಲ್ಲವಾಗಿ ಕುರುಡು ಮನಸ್ಸಿನ ನಮಗೆ ಗಾಂಧಿಯೇ ಅನೈತಿಕವಾಗಿ ಕಾಣುವ ಮನೋಭಾವ ಬೆಳೆದಿದೆ,
ಗಾಂಧಿ ತತ್ವ ಅರಿವಾಗಲು ಮೊದಲು ನಾವು ನಾಗರಿಕರಾಗಬೇಕು,
ಗೌತಮ ಬುದ್ಧರ ಪರಿಚಯವಾಗಬೇಕು,
ಬಸವಣ್ಣನವರು ಅರ್ಥವಾಗಬೇಕು,
ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಓದಬೇಕು,
ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಬೇಕು,
ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕು ಮತ್ತು ಶುದ್ಧೀಕರಣ ಮಾಡಿಕೊಳ್ಳಬೇಕು,
ಆಗ ಮಾತ್ರ ದೈವಿಕ ಗುಣದ ಗಾಂಧಿ ಸಿಗುತ್ತಾರೆ. ಆ ವ್ಯಕ್ತಿತ್ವ ನಮಗಿದೆಯೇ………….
ಗಾಂಧಿ ವರ್ಸಸ್ ಘೋಡ್ಸೆ…..
ತ್ರಿಶಂಕು ಸ್ಥಿತಿಯಲ್ಲಿ ಅಂಬೇಡ್ಕರ್….
ಹಿನ್ನಡೆಯಲ್ಲಿ ಬುದ್ಧ, ಬಸವ, ವಿವೇಕಾನಂದ………
ಮುನ್ನಡೆಯಲ್ಲಿ ಮೋದಿ ಭಾರತ………
ನಿಮ್ಮ ವಯಸ್ಸೆಷ್ಟು ?
ನೀವು ಅನಕ್ಷರಸ್ಥರೆ ?
ಕಲಿತಿದ್ದರೆ ಎಲ್ಲಿಯವರೆಗೆ ?
ಯಾವ ಪ್ರದೇಶದವರು ?
ಯಾವ ಜಾತಿಯವರು ?
ಯಾವ ಧರ್ಮದವರು ?
ಯಾವ ಭಾಷೆಯವರು ?
ಯಾವ ಪಕ್ಷದವರು ?
ಯಾವ ಸಿದ್ದಾಂತದವರು ?
ನಿಮ್ಮ ಉದ್ಯೋಗವೇನು ?
ನಿಮ್ಮ ತಂದೆ ತಾಯಿ ಹಿನ್ನೆಲೆ ಏನು ?
ನಿಮ್ಮ ಸ್ನೇಹಿತರು ಯಾರು ?
ನೀವು ಮೆಚ್ಚುವ ಗುರುಗಳು ಯಾರು ?
ನೀವು ಆಸಕ್ತಿಯಿಂದ ಓದುವ ಪುಸ್ತಕಗಳು ಯಾವುದು ?
ನಿಮ್ಮ ಆಸಕ್ತಿ ಏನು ?
ನಿಮ್ಮ ಸ್ವಭಾವ ಹೇಗೆ ?
ನಿಮ್ಮ ಕೌಟುಂಬಿಕ ಸಂಬಂಧ ಹೇಗಿದೆ ?
ನಿಮಗೆ ಭಾರತದ ಒಟ್ಟು ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆಯೇ… ?
ಈ ವಿಷಯ ಯೋಚಿಸುವಷ್ಟು ಸಮಯಾವಕಾಶ ನಿಮಗಿದೆಯೇ…. ?
ಈ ಎಲ್ಲಾ ಅಂಶಗಳನ್ನು ಒಳಗೊಂಡ ಮತ್ತು ಅದರಿಂದ ಪ್ರಭಾವಿತವಾದ ಚಿಂತನಾ ಲಹರಿಯೊಂದು ನಮ್ಮೊಳಗೆ ಹರಿಯುತ್ತಿರುತ್ತದೆ ಹಾಗೂ ಅರಿಯುತ್ತಿರುತ್ತದೆ………
ಆದರ ಅನ್ವಯ ನಮಗೆ ಮೇಲಿನ ಭಾರತದ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ರೂಪಗೊಂಡಿರುತ್ತದೆ…..
ಮಾಧ್ಯಮಗಳೋ, ಸಾಮಾಜಿಕ ಜಾಲತಾಣಗಳೋ, ವಿಚಾರ ಸಂಕಿರಣಗಳೋ ಎಲ್ಲೇ ಆಗಲಿ ವಾದ ಚರ್ಚೆಗಳಲ್ಲಿ ಮೇಲೆ ಪ್ರಸ್ತಾಪಿಸಿದ ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಅದನ್ನು ಗಮನದಲ್ಲಿರಿಸಿಕೊಂಡು…………
157 ವರ್ಷಗಳ ಹಿಂದೆ ಹುಟ್ಟಿದ ಮೋಹನ ದಾಸ್ ಕರಮಚಂದ ಗಾಂಧಿ ಎಂಬ ಮಗುವಿನ ಸುಮಾರು 79 ವರ್ಷಗಳ ಬದುಕಿನ ಇತಿಹಾಸದ ಭಾಗ ಭಾರತದ ವ್ಯವಸ್ಥೆಯ ಮೇಲೆ ಭೀರಿದ ಪ್ರಭಾವಳಿಯಲ್ಲಿ ಸ್ವಾತಂತ್ರ್ಯ ಭಾರತದ ಇಂದಿನ ಸ್ಥಿತಿ ಗತಿಯ ಬಗ್ಗೆ ಒಂದು ನೋಟ………..
60 ಲಕ್ಷ ಕೋಟಿ ಗಾತ್ರದ ಆರ್ಥಿಕತೆಯತ್ತ ಭಾರತ…..
ಡಿಜಿಟಲ್ ಇಂಡಿಯಾ,
ಸ್ವಚ್ಛ ಭಾರತ್, ಫಿಟ್ ಇಂಡಿಯಾ
ಕಾರ್ಯಯೋಜನೆಗಳ ಮುಖಾಂತರ ಅತ್ಯಂತ ಶ್ರೀಮಂತರ ಮನಸ್ಥಿತಿಯತ್ತಾ ಸಾಗುತ್ತಿರುವ ಭಾರತ…..
ಇದನ್ನೇ ಮೇಲೆ ಹೇಳಿದ್ದು ಮುನ್ನಡೆಯಲ್ಲಿ ಮೋದಿ ಭಾರತ………
ಮತ್ತೆ ಮೋಹನ್ ದಾಸ್ ಕರಮಚಂದ್ ಗಾಂಧಿ ಎಲ್ಲಿ ?………
ಈ ಸಂದರ್ಭದಲ್ಲಿ ಗಾಂಧಿಯ ಹುಡುಕಾಟ ಅರ್ಥಹೀನ. ಆದರೂ ನಮ್ಮಂತ ಕೆಲವು ಹುಚ್ಚರು ಇನ್ನೂ ಗಾಂಧಿ ಅಮಲಿನಲ್ಲಿ ಆತನನ್ನು ಹುಡುಕುತ್ತಿದ್ದೇವೆ……….
ಎಲ್ಲಿ ಸಿಗಬಹುದು ಗಾಂಧಿ…..??????
ಬನ್ನಿ ನನ್ನೊಂದಿಗೆ ತೋರಿಸುತ್ತೇನೆ………
ಭಾರತದ ಬೆಳಗಾವಿ ಜಿಲ್ಲೆಯ ಒಂದು ಹಳ್ಳಿಯ ನಿರಾಶ್ರಿತ ಶಿಬಿರದ ಮುಂದೆ ಸರ್ಕಾರದ ಪರಿಹಾರಕ್ಕಾಗಿ ಕಾದು ಕುಳಿತು ಎಲ್ಲವನ್ನೂ ಕಳೆದುಕೊಂಡ ರೈತನೊಬ್ಬ ದಾರಿಯತ್ತ ದೃಷ್ಟಿ ನೆಟ್ಟು ಸರ್ಕಾರದ ಜೀಪು ಬರುವುದನ್ನೇ ತದೇಕಚಿತ್ತದಿಂದ ನೋಡುತ್ತಿರುವ ಕಣ್ಣುಗಳಲ್ಲಿ ಗಾಂಧಿ ಕಾಣಿಸುತ್ತಾರೆ…….
ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ದಲಿತರೊಬ್ಬರನ್ನು ಇಳಿಸಿ ಸಹಜವಾಗಿ ಅದರಿಂದ ಆತ ಉಸಿರುಗಟ್ಟಿ ಸತ್ತ ನಂತರ ಆತನ ಹೆಂಡತಿ ಮಕ್ಕಳು ಆ ಶವದ ಮೇಲೆ ಬಿದ್ದು ಅಳುತ್ತಿರುವಾಗ ಅವರ ಕಣ್ಣೀರಿನಲ್ಲಿ ಗಾಂಧಿಯನ್ನು ನೋಡಬಹುದು…….
ಭಾರತದ ಬಹುತೇಕ ಎಲ್ಲಾ ಪ್ಲೈ ಓವರ್ ರಸ್ತೆಗಳ ಕೆಳಗೆ ಮನುಷ್ಯ ಪ್ರಾಣಿಯ ಲಕ್ಷಣಗಳನ್ನೇ ಹೊಂದಿದ್ದರೂ ಕೆಲವು ಅನಾಥರು ಗಾಳಿಚಳಿಮಳೆಗೂ ಜಗ್ಗದೆ ಅಲ್ಲಿಯೇ ವಾಸ ಮಾಡುತ್ತಿರುವವರ ಮನಸ್ಸುಗಳಲ್ಲಿ ಗಾಂಧಿಯನ್ನು ನೋಡಬಹುದು……
ಬಸ್ ರೈಲು ನಿಲ್ದಾಣಗಳಲ್ಲಿ ಬಣ್ಣ ಬಣ್ಣದ ಉಡುಗೆಗಳಲ್ಲಿ, ರಂಗುರಂಗಿನ ಮೇಕಪ್ಪುಗಳಲ್ಲಿ ಗಿರಾಕಿಗಳಿಗಾಗಿ ಕಾದು ಕುಳಿತಿರುವ ನಿತ್ಯ ಸುಮಂಗಲಿಯರ ಕನಸುಗಳಲ್ಲಿ ಗಾಂಧಿ ಅಡಗಿದ್ದಾರೆ. ಸ್ವಲ್ಪ ಕಷ್ಟ ಪಟ್ಟರೆ ಕಾಣಬಹುದು…..
ಬೃಹತ್ ನಗರಗಳ ಸರ್ಕಾರಿ ಆಸ್ಪತ್ರೆಗಳ ಪ್ರತಿ ಹಾಸಿಗೆಯ ಮೇಲೆ ಬಡತನ ಮತ್ತು ಅಲ್ಲಿನ ವ್ಯವಸ್ಥೆಯಿಂದಾಗಿಯೇ ತನ್ನ ಆಯಸ್ಸು ಕಡಿಮೆ ಆಗಿರುವುದನ್ನು ಯೋಚಿಸುತ್ತಲೇ ಕೆಮ್ಮುತ್ತಿರುವ ರೋಗಿಗಳ ಉಗುಳಿನಲ್ಲಿ ಗಾಂಧಿ ಅಡಗಿದ್ದಾರೆ…..
ಕಾಲೇಜಿನ ಹಿಂಭಾಗದ ಟೀ ಅಂಗಡಿಯಲ್ಲಿ ತಿನ್ನುವ ಬನ್ನಿನೊಳಗೆ ಗಾಂಜಾ, ಚರಸ್, ಕೊಕೇನ್ ಇಟ್ಟು ಯುವಕರಿಗೆ ಮಾರಾಟ ಮಾಡಿ ಬದುಕು ಕಟ್ಟುವ ಮತ್ತು ಅದನ್ನು ಸೇವಿಸಿ ಬೈಕ್ ವೀಲಿಂಗ್ ಮಾಡುತ್ತಾ ರಾತ್ರಿಗಳಲ್ಲಿ ಮಜಾ ಉಡಾಯಿಸುವ ಹಾಗು ಅದನ್ನು ನಿಯಂತ್ರಿಸಲಾಗದ ಬೃಹತ್ ಪೋಲೀಸ್ ವ್ಯವಸ್ಥೆಯ ಅಸಹಾಯಕತೆಯ ನಿಟ್ಟುಸಿರಿನಲ್ಲಿ ಗಾಂಧಿ ಸ್ಪಷ್ಟವಾಗಿ ಕಾಣುತ್ತಾರೆ.
ಅಂಬೇಡ್ಕರ್ ಎಂಬ ಅಸ್ಪೃಶ್ಯ ಹುಡುಗ ಅದು ಯಾವ ಮಾಯೆಯಲ್ಲೋ ತನ್ನ ಅತ್ಯದ್ಭುತ ಪ್ರತಿಭೆಯಿಂದ ಈ ಆಧ್ಯಾತ್ಮದ ತವರೂರು ಭಾರತದ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಅಂಗೀಕರಿಸಲ್ಪಟ್ಟ ಕಾನೂನುಗಳು ಅವರ ಆಶಯಕ್ಕೆ ವಿರುದ್ದವಾಗಿ ಬಹುತೇಕ ಶ್ರೀಮಂತರ ರಕ್ಷಕವಾಗಿ ಬಡವರು ಮಾತ್ರ ಅದಕ್ಕೆ ಬಲಿಯಾಗಿದ್ದು ಆ ಬಡವರ ಚರ್ಮದ ಬೆವರಿನಲ್ಲಿ ಗಾಂಧಿ ಗೋಚರಿಸುತ್ತಾರೆ……
ಸತ್ಯದ ಗಾಂಧಿ….
******************
ಸತ್ಯದ ಶುಧ್ಧತೆ ಮತ್ತು ಪ್ರಾಮಾಣಿಕ ಸತ್ಯದ ನಿಷ್ಕಳಂಕ ವ್ಯಕ್ತಿತ್ಬವನ್ನು ಸ್ಪಷ್ಟವಾಗಿ ಸಾರುವ ಒಂದು ಸಣ್ಣ ಕಥೆ ಮಹಾತ್ಮ ಗಾಂಧಿಯವರ ದೃಷ್ಟಿಕೋನದಲ್ಲಿ.
ಎಲ್ಲೋ ಓದಿದ್ದು…..
ಒಮ್ಮೆ ಬ್ರಿಟಿಷ್ ವ್ಯಕ್ತಿಯೊಬ್ಬ ಗಾಂಧಿಯವರ ಬಳಿ ಅವರ ಸತ್ಯ ನಿಷ್ಠೆಯನ್ನು ಪ್ರಶ್ನೆ ಮಾಡುವ ಅಥವಾ ಅವಹೇಳನ ಮಾಡುವ ರೀತಿಯಲ್ಲಿ ಅವರಿಗೆ ಹೀಗೆ ಹೇಳುತ್ತಾನೆ.
” ಗಾಂಧಿಯವರೆ, ನಿಮ್ಮ ಕಠೋರ ಸತ್ಯ ಎಷ್ಟೊಂದು ಅಮಾನವೀಯ ಗೊತ್ತೆ. ಒಮ್ಮೆ ಒಬ್ಬ ಬೇಟೆಗಾರ ಒಂದು ಜಿಂಕೆಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬರುತ್ತಾನೆ. ಅವನಿಂದ ತಪ್ಪಿಸಿಕೊಂಡು ಓಡುತ್ತಾ ಬರುವ ಜಿಂಕೆ ದಾರಿಯಲ್ಲಿ ಒಂದು ಮರದ ಕೆಳಗೆ ತಪಸ್ಸು ಮಾಡುತ್ತಾ ಕುಳಿತಿದ್ದ ಮಹಾನ್ ಸತ್ಯಸಂಧ ಮುನಿಯ ಬಳಿ
” ಅಯ್ಯಾ ಋಷಿ , ಬೇಟೆಗಾರನೊಬ್ಬ ನನ್ನನ್ನು ಕೊಲ್ಲಲು ಬರುತ್ತಿದ್ದಾನೆ. ದಯವಿಟ್ಟು ರಕ್ಷಿಸು. ತಪ್ಪಿಸಿಕೊಳ್ಳಲು ಜಾಗ ತೋರಿಸು ” ಎಂದು ಕೇಳಿಕೊಳ್ಳುತ್ತದೆ.
ಆಗ ಋಷಿ ‘ ಆಯಿತು. ಇಲ್ಲೇ ನನ್ನ ಹಿಂದೆ ಇರುವ ಆ ಗುಹೆಯಲ್ಲಿ ಅಡಗಿಕೋ’ ಎಂದು ಹೇಳುತ್ತಾನೆ.
ಸ್ವಲ್ಪ ಹೊತ್ತಿನಲ್ಲಿ ಜಿಂಕೆಯನ್ನು ಹುಡುಕುತ್ತಾ ಅದೇ ದಾರಿಯಲ್ಲಿ ಬಂದ ಬೇಟೆಗಾರ ಅಲ್ಲಿದ್ದ ಅದೇ ಮುನಿಯನ್ನು
” ಋಷಿವರ್ಯ ನಾನೊಂದು ಜಿಂಕೆಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದೆ ನೀವೇನಾದರೂ ನೋಡಿದಿರೆ ”
ಅದಕ್ಕೆ ಎಂದೂ ಸುಳ್ಳಾಡದ ಆ ಮುನಿ
‘ ಹೌದು ನೋಡಿದೆ ‘ ಎನ್ನುತ್ತಾನೆ. ಬೇಟೆಗಾರ ‘ ಹಾಗಾದರೆ ಎಲ್ಲಿ ಹೋಯಿತು’
ಆಗ ಮುನಿ ‘ ನನ್ನನ್ನು ರಕ್ಷಣೆಗಾಗಿ ಕೇಳಿಕೊಂಡಿತು. ನಾನೇ ಹಿಂದೆ ಇರುವ ಗುಹೆಯಲ್ಲಿ ಬಚ್ಚಿಟ್ಟುಕೊಳ್ಳಲು ಹೇಳಿದ್ದೇನೆ’
ಅದನ್ನು ಕೇಳಿದ ಬೇಟೆಗಾರ ಗುಹೆಗೆ ಹೋಗಿ ಜಿಂಕೆಯನ್ನು ಕೊಂದು ಹೊತ್ತೊಯ್ಯುತ್ತಾನೆ.”
ಈ ಕಥೆಯನ್ನು ಗಾಂಧಿಗೆ ಹೇಳಿದ ಆ ಬ್ರಿಟಿಷ್ ” ನೋಡಿದಿರಾ ಗಾಂಧಿ, ಸಾಮಾನ್ಯ ಸಮಯ ಪ್ರಜ್ಞೆ ಇಲ್ಲದ ಮುನಿ ಒಂದು ಸಣ್ಣ ಸುಳ್ಳು ಹೇಳಿದ್ದರೆ ಆ ಅಮಾಯಕ ಜಿಂಕೆಯ ಪ್ರಾಣ ಉಳಿಸಬಹುದಿತ್ತು. ನಿಮ್ಮ ಆ ಸತ್ಯ ಕೂಡ ಕೆಲವೊಮ್ಮೆ ಎಷ್ಟೊಂದು ಕಠೋರ ”
ಅದಕ್ಕೆ ಗಾಂಧಿಯ ಉತ್ತರ
” ಗೆಳೆಯ, ನಿಮ್ಮ ಕಥೆಯಲ್ಲಿ ತಪ್ಪು ಸತ್ಯದ್ದಲ್ಲ. ಅದು ಋಷಿಮುನಿಯದು. ಒಂದು ವೇಳೆ ನಾನು ಋಷಿಯ ಜಾಗದಲ್ಲಿದ್ದಿದ್ದರೆ ಬೇಟೆಗಾರ ಬಂದು ಕೇಳಿದಾಗ
‘ ಹೌದು ಜಿಂಕೆಯನ್ನು ನಾನೇ ಬಚ್ಚಿಟ್ಟಿದ್ದೇನೆ, ಅದು ಇರುವ ಜಾಗ ತಿಳಿದಿದೆ. ಆದರೆ ಅದನ್ನು ನೀನು ಕೊಲ್ಲುವುದರಿಂದ ಅದು ಎಲ್ಲಿದೆ ಎಂದು ಹೇಳುವುದಿಲ್ಲ.ಅದಕ್ಕಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ದ ಎಂದೇ ಹೇಳುತ್ತೇನೆ. ಸಮಸ್ಯೆ ಇರುವುದು ಸತ್ಯದ ಆಳದಲ್ಲಿ ಅಲ್ಲ. ಅದರ ಆಚರಣೆಗಳ ಪ್ರಾಮಾಣಿಕತೆಯಲ್ಲಿ.” ಎನ್ನುತ್ತಾರೆ.
ಮುಂದಿನ ವಿವರಣೆ ಬೇಕಿಲ್ಲ ಅಲ್ಲವೇ ?
ಸತ್ಯದ ದೈವಿಕತೆಯ ಸಾಕ್ಷಾತ್ಕಾರವೆಂದರೆ ಇದೇ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ