
ದೊಡ್ಡಬಳ್ಳಾಪುರ: ಪತಿಯೊಂದಿಗೆ ಲಾಡ್ಜ್ಗೆ ತೆರಳಿದ್ದ 21 ವರ್ಷದ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಶಂಕಿತನಾಗಿದ್ದ ಮುದಗೆರೆ ನಿವಾಸಿ ಆನಂದ್ ತನ್ನ ಸ್ವಂತ ಊರಾದ ಮುದಗೆರೆ ಕೆರೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಕೊಲೆಯಾದ ಮಹಿಳೆಯನ್ನು ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ವಿದ್ಯಾ ಹಾಗೂ ಮೃತ ಆನಂದ್ರನ್ನು ಮುದಗೆರೆ ನಿವಾಸಿ ಎಂದು ಗುರುತಿಸಲಾಗಿದೆ.

ವಿದ್ಯಾ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಆನಂದ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮಗುವೊಂದಿದೆ ಎನ್ನಲಾಗಿದೆ. ಇತ್ತೀಚೆಗೆ ಇಬ್ಬರೂ ದೊಡ್ಡಬಳ್ಳಾಪುರದ ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಲಾಡ್ಜ್ನಲ್ಲಿ ನಡೆದಿದ್ದೇನು?
ಸೆಪ್ಟೆಂಬರ್ 15ರಂದು ಬೆಳಗ್ಗೆ ಸುಮಾರು 11.48ರ ವೇಳೆಗೆ ವಿದ್ಯಾ ಮತ್ತು ಆನಂದ್ ಲಾಡ್ಜ್ಗೆ ಪ್ರವೇಶಿಸುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರೂ ಕೊಠಡಿಗೆ ತೆರಳಿದ ಬಳಿಕ ಕೆಲ ಸಮಯದ ನಂತರ ಆನಂದ್ ಮಾತ್ರ ಕೊಠಡಿಯಿಂದ ಹೊರಬಂದಿದ್ದಾನೆ.
ವಿದ್ಯಾ ಅವರ ಮೊಬೈಲ್ಫೋನ್ನ್ನು ತನ್ನೊಂದಿಗೆ ತೆಗೆದುಕೊಂಡು ಕೊಠಡಿಗೆ ಬೀಗ ಹಾಕಿದ ಬಳಿಕ ಆನಂದ್ ನೇರವಾಗಿ ಮುದಗೆರೆಗೆ ತೆರಳಿದ್ದಾನೆ. ನಂತರ ಅದೇ ದಿನ ಮುದಗೆರೆ ಕೆರೆಯಲ್ಲಿ ಆನಂದ್ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಇದೀಗ ಬೆಳಕಿಗೆ ಬಂದಿದೆ.

ವಿದ್ಯಾ ಅವರ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಕಂಪನಿಯ ಗುರುತಿನ ಚೀಟಿಗೆ ಬಳಸುವ ಟ್ಯಾಗ್ನಿಂದ ಉಸಿರುಗಟ್ಟಿಸಿರುವ ಸಾಧ್ಯತೆ ಇದೆ ಎಂಬ ಶಂಕೆಯನ್ನು ತನಿಖಾ ಮೂಲಗಳು ವ್ಯಕ್ತಪಡಿಸಿತ್ತು.
ವಿದ್ಯಾ ಸಾವಿನ ನಿಖರ ಕಾರಣ ಹಾಗೂ ಆನಂದ್ ಸಾವಿನ ಹಿಂದಿನ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಾಡ್ಜ್ನ ಸಿಸಿ ಕ್ಯಾಮೆರಾ ದೃಶ್ಯಗಳು, ಮೊಬೈಲ್ಫೋನ್ ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ವಿದ್ಯಾ ಸಾವಿನ ಪ್ರಕರಣದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಆನಂದ್ ಕೂಡ ಮೃತಪಟ್ಟಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದ್ದು, ಇಬ್ಬರ ಸಾವಿನ ನಡುವಿನ ಸಂಬಂಧದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈ ಕುರಿತು ದೊಡ್ಡಬಳ್ಳಾಪುರ ನಗರ ಹಾಗೂ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.