
ಭಾರತ ರತ್ನ ಡಾ. ಸರ್ ಎಂ. ವಿಶ್ವೇಶ್ವರಯ್ಯನವರ 165ನೇ ಜಯಂತಿ ಅಂಗವಾಗಿ ಮೈಸೂರಿನ ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ 59ನೇ ಎಂಜಿನಿಯರ್‌ಗಳ ದಿನಾಚರಣೆಯಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಪಾಲ್ಗೊಂಡು ಎಂಜಿನಿಯರ್‌ಗಳ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಪುರಾಣ ಶ್ರೇಷ್ಠವಾದ ನಮ್ಮ ನಾಡು ದೇವರು, ಸನ್ಯಾಸಿಗಳು ಹಾಗೂ ಸಾಧಕರು ಮೆಟ್ಟಿದ ಪುಣ್ಯಭೂಮಿಯಾಗಿದೆ. ಇಂತಹ ಸಂಪ್ರದಾಯಬದ್ಧ ದೇಶದಲ್ಲಿ ವಿಜ್ಞಾನ ಹಾಗೂ ಎಂಜಿನಿಯರ್‌ಗಳ ಸೇವೆ ಅತ್ಯಂತ ವಿಶಿಷ್ಟವಾದದ್ದು ಎಂದು ಸಚಿವರು ಬಣ್ಣಿಸಿದರು.
ಪ್ರಾಚೀನ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳು ಹಾಗೂ ಅಣೆಕಟ್ಟುಗಳು ಇಂದಿಗೂ ಸುಭದ್ರವಾಗಿರುವುದು ನಮ್ಮ ಎಂಜಿನಿಯರ್‌ಗಳ ಕಾಯಕ ನಿಷ್ಠೆ ಹಾಗೂ ಕೌಶಲ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಯಾವುದೇ ಹುದ್ದೆ, ಅಧಿಕಾರ ಅಥವಾ ರೈತರ ಕಾಯಕದೊಂದಿಗೆ ಇದನ್ನು ಹೋಲಿಕೆ ಮಾಡಲು ಅಥವಾ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕಲ್ಪನೆಗೂ ನಿಲುಕದಷ್ಟು ಅಭಿವೃದ್ಧಿ ಕಾರ್ಯಗಳನ್ನು ಅಂದೇ ಮಾಡಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಸ್ಮರಿಸಿದ ಸಚಿವರು, ಇಂದಿನ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಕಾರಣರಾದ ನಾಡಿನ ಸಮಸ್ತ ಎಂಜಿನಿಯರ್‌ಗಳಿಗೆ ಈ ಕಾರ್ಯಕ್ರಮವನ್ನು ಅರ್ಪಿಸುತ್ತಿರುವುದು ಹಾಗೂ ಈ ವೇದಿಕೆಯ ಮೂಲಕ ದೇಶದ ಎಂಜಿನಿಯರ್‌ಗಳನ್ನು ಗೌರವಿಸುತ್ತಿರುವುದು ತಮ್ಮ ಸುಕೃತ ಎಂದು ಭಾವುಕರಾದರು. ಅಲ್ಲದೆ, ನಾಡಿನ ಜನತೆಗೆ ಸರ್ ಎಂ.ವಿ. ಅವರ 165ನೇ ಜಯಂತಿಯ ಶುಭಾಶಯಗಳನ್ನು ಕೋರಿದರು.
ದೇಶವನ್ನು ತಂತ್ರಜ್ಞಾನದ ಮೂಲಕ ಮುನ್ನಡೆಸುವ ಹಾಗೂ ನಿರ್ಮಿಸುವ ಕೆಲಸವನ್ನು ನಮ್ಮ ಎಂಜಿನಿಯರ್‌ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿದರೆ, ಭಾರತವು ಮತ್ತಷ್ಟು ವೇಗವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಕುರಿತು ಮಾತನಾಡಿದ ಸಚಿವರು, “ಶ್ರೀಗಳು ವಿಜ್ಞಾನ ಹಾಗೂ ತಂತ್ರಜ್ಞಾನದ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅವರಂತಹ ಜ್ಞಾನಿಗಳು ಈ ಕಾರ್ಯಕ್ರಮದ ಮೆರಗನ್ನು ಇಮ್ಮಡಿಗೊಳಿಸಿದ್ದಾರೆ. ಅವರ ಪ್ರೇರಣಾದಾಯಕ ನುಡಿಗಳು ಯುವ ಪೀಳಿಗೆಯ ಎಂಜಿನಿಯರ್‌ಗಳಿಗೆ ಸದಾ ಮಾದರಿಯಾಗಲಿವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಚಿವ ಚಲುವರಾಯಸ್ವಾಮಿ ಅವರು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರೊಡಗೂಡಿ ಎಂಜಿನಿಯರ್‌ಗಳ ಸಂಸ್ಥೆಯ ಆವರಣದಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಇದೇ ವೇದಿಕೆಯಲ್ಲಿ ತಮ್ಮ ವೃತ್ತಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕ ಹಾಗೂ ಹಿರಿಯ ಎಂಜಿನಿಯರ್‌ಗಳನ್ನು ಸಚಿವರು ಹಾಗೂ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಈ ಅರ್ಥಪೂರ್ಣ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಿವಿಧ ಶಾಖಾಮಠಗಳ ಸ್ವಾಮೀಜಿಗಳು, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಚಾಮರಾಜ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಹಾಗೂ ಭಾರತೀಯ ಎಂಜಿನಿಯರ್‌ಗಳ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.