ಗುಂಡಿ ರಸ್ತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಬಲಿಪಶು: ಹದಗೆಟ್ಟ ರಸ್ತೆ–ನಿರ್ವಹಣೆ ಕೊರತೆ; ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುವ ಬಸ್‌ಗಳಿಂದ ಪ್ರಯಾಣಿಕರ ಪರದಾಟ

ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ. ಮಾರ್ಗ ಮಧ್ಯೆಯೇ ಬಸ್‌ಗಳು ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಲಕ್ಕಸಂದ್ರ ಕ್ರಾಸ್ ಬಳಿ ಸೋಮವಾರ ತೂಬಗೆರೆ ಮಾರ್ಗವಾಗಿ ಮಂಚೇನಹಳ್ಳಿ–ದೊಡ್ಡಬಳ್ಳಾಪುರ ನಡುವೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಕೆಟ್ಟು ನಿಂತಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರ್ಯಾಯ ವಾಹನಗಳಿಗಾಗಿ ಕಾಯಬೇಕಾಯಿತು.

ತೂಬಗೆರೆ ಮಾರ್ಗದ ಹಲವು ಕಡೆಗಳಲ್ಲಿ ರಸ್ತೆ ಹದಗೆಟ್ಟಿದ್ದು, ಗುಂಡಿಗಳು ಹಾಗೂ ಏರುಪೇರುಗಳಿಂದ ವಾಹನಗಳ ಸಂಚಾರವೇ ಕಷ್ಟಕರವಾಗಿದೆ. ಅದರಲ್ಲೂ ಪ್ರತಿನಿತ್ಯ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಬಸ್‌ಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿರುವುದರಿಂದ ವಾಹನಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಇದರ ಪರಿಣಾಮವಾಗಿ ಬಸ್‌ಗಳು ಪದೇಪದೇ ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುತ್ತಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಬಸ್‌ಗಳ ನಿರ್ವಹಣೆಯಲ್ಲೂ ನಿರ್ಲಕ್ಷ್ಯ?

ರಸ್ತೆಗಳ ದುಸ್ಥಿತಿಯ ಜೊತೆಗೆ ಬಸ್‌ಗಳ ಸಮಯೋಚಿತ ತಪಾಸಣೆ ಹಾಗೂ ನಿರ್ವಹಣೆಯ ಕೊರತೆಯೂ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಪ್ರಯಾಣಿಕರು ಆಕ್ಷೇಪಿಸಿದ್ದಾರೆ. ಹಳೆಯ ಹಾಗೂ ತಾಂತ್ರಿಕ ದೋಷಗಳಿರುವ ಬಸ್‌ಗಳನ್ನು ಗ್ರಾಮೀಣ ಮಾರ್ಗಗಳಲ್ಲಿ ಓಡಿಸುತ್ತಿರುವುದರಿಂದ ಪ್ರಯಾಣಿಕರ ಸುರಕ್ಷತೆ ಬಗ್ಗೆಯೂ ಪ್ರಶ್ನೆಗಳು ಮೂಡಿವೆ.

ಗ್ರಾಮೀಣ ಭಾಗದ ಜನರು ಶಾಲೆ, ಕಾಲೇಜು, ಉದ್ಯೋಗ ಹಾಗೂ ವಿವಿಧ ಕೆಲಸಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ ಬಸ್‌ಗಳು ಅರ್ಧ ದಾರಿಯಲ್ಲೇ ಕೈಕೊಟ್ಟರೆ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲ ವರ್ಗದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ರಸ್ತೆ ದುರಸ್ತಿ ಜತೆಗೆ ಬಸ್‌ಗಳ ಪರಿಶೀಲನೆಗೆ ಆಗ್ರಹ

ತೂಬಗೆರೆ–ಮಂಚೇನಹಳ್ಳಿ–ದೊಡ್ಡಬಳ್ಳಾಪುರ ಮಾರ್ಗದ ಹದಗೆಟ್ಟ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಬೇಕು. ಜತೆಗೆ ಗ್ರಾಮೀಣ ಮಾರ್ಗಗಳಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ತಾಂತ್ರಿಕ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ, ದೋಷಪೂರಿತ ಬಸ್‌ಗಳನ್ನು ಬದಲಾಯಿಸಬೇಕು. ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಸಮಯಕ್ಕೆ ಸರಿಯಾದ ಬಸ್ ಸೇವೆ ಒದಗಿಸಲು ಸಾರಿಗೆ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!