ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಮರೇಶ್ ಗೌಡ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ಕೆರೆಯಲ್ಲಿ ಸುಮಾರು 5 ಅಡಿ ಆಳದ ವಿಸರ್ಜನಾ ಹೊಂಡವನ್ನು ಸಿದ್ಧಪಡಿಸಲಾಗಿದೆ. ಗಣೇಶ ಮೂರ್ತಿಗಳನ್ನು ಹೊತ್ತು ತರುವ ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳು ಕೆರೆ ಬಳಿಗೆ ಸುಗಮವಾಗಿ ತೆರಳಲು ಸುಮಾರು 30ರಿಂದ 40 ಲೋಡ್‌ಗಳಷ್ಟು ಮಣ್ಣನ್ನು ಹಾಕಿ ರಸ್ತೆ ಮಾರ್ಗವನ್ನು ಸಮತಟ್ಟುಗೊಳಿಸಲಾಗಿದೆ.

ರಾತ್ರಿ ವೇಳೆಯಲ್ಲೂ ಗಣೇಶ ವಿಸರ್ಜನೆಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಲೈಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಅಲ್ಲದೆ, ಭದ್ರತೆ ಹಾಗೂ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲು ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆಗೆ ನೀರಿನ ಅಭಾವ ಎದುರಿಸುತ್ತಿರುವವರು ಗುಂಡಮಗೆರೆ ಕೆರೆಯಲ್ಲಿ ಸಿದ್ಧಪಡಿಸಿರುವ ಹೊಂಡದಲ್ಲಿ ಗಣೇಶ ಮೂರ್ತಿಗಳನ್ನು ಸುರಕ್ಷಿತವಾಗಿ ವಿಸರ್ಜನೆ ಮಾಡಿಕೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕರಿಸಿ, ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!