
ವರಮಹಾಲಕ್ಷ್ಮಿ ಹಬ್ಬ…..
ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,….
ನಿನ್ನೆ ರಸ್ತೆಯಲ್ಲಿ ಓಡಾಡುತ್ತಿದ್ದರೆ ಮಾರುಕಟ್ಟೆ ಪ್ರದೇಶಗಳು ಕಿಕ್ಕಿರಿದು ಜನರಿಂದ ತುಂಬಿತ್ತು. ಹೂವು, ಹಣ್ಣು, ತರಕಾರಿ, ಬಟ್ಟೆ, ಚಿನ್ನ, ಬೆಳ್ಳಿ ಅಂಗಡಿಗಳು ಎಂದಿಗಿಂತ ಹೆಚ್ಚು ಜನಸಂದಣಿಯಿಂದ ಕೂಡಿದ್ದವು. ಅವುಗಳ ಬೆಲೆಯೂ ಸಹ ಹೆಚ್ಚಾಗಿತ್ತು. ಅದಕ್ಕೆ ಕಾರಣ ವರಮಹಾಲಕ್ಷ್ಮಿ ಹಬ್ಬ.
15/20 ವರ್ಷಗಳ ಹಿಂದೆ ಅಷ್ಟೇನೂ ಪ್ರಾಮುಖ್ಯತೆ ಪಡೆಯದ ಈ ಹಬ್ಬ ಟೆಲಿವಿಷನ್ ಸುದ್ದಿಮಾಧ್ಯಮಗಳ ಜನಪ್ರಿಯತೆಯೊಂದಿಗೆ ಈಗ ಹೆಚ್ಚು ಹೆಚ್ಚು ವ್ಯಾಪಕತೆಯನ್ನು ಪಡೆಯಿತು.
ಏನೇ ಆಗಲಿ ಭಾರತದಂತ ಪ್ರಜಾಪ್ರಭುತ್ವ ದೇಶದಲ್ಲಿ ಅವರವರ ಸ್ವಾತಂತ್ರ್ಯ ಮತ್ತು ಆಸಕ್ತಿಯನ್ನು ಅವರವರಿಗೇ ಬಿಡುತ್ತಾ, ನನ್ನ ವೈಯಕ್ತಿಕ ಅಭಿಪ್ರಾಯವನ್ನು ಸಹ ಅದೇ ಸ್ವಾತಂತ್ರ್ಯ ಮತ್ತು ಹಕ್ಕಿನ ಅಡಿಯಲ್ಲಿ ಮಂಡಿಸುತ್ತಿದ್ದೇನೆ….
ಸಾಮಾನ್ಯವಾಗಿ, ಸಾಮಾನ್ಯ ಜನರ ಅಭಿಪ್ರಾಯದಲ್ಲಿ ವರಮಹಾಲಕ್ಷ್ಮಿ ಹಬ್ಬ ಎಂದರೆ ಅದು ಹಣ, ಅಧಿಕಾರ, ಅಂತಸ್ತು, ಸಂಪತ್ತಿನ ಅಭಿವೃದ್ಧಿಗೆ ಪೂರಕವಾದ ಲಕ್ಷ್ಮಿ ಹಬ್ಬ. ಲಕ್ಷ್ಮಿ ಈ ಎಲ್ಲದರ ಒಡತಿ ಅಥವಾ ಎಲ್ಲರಿಗೂ ಇದನ್ನು ಹಂಚುವ ದೇವತೆ ಎಂಬ ಪೌರಾಣಿಕ ಅಭಿಪ್ರಾಯ ಮತ್ತು ನಂಬಿಕೆ ಇದೆ. ಭಾರತದಲ್ಲಿ ಮುಖ್ಯವಾಗಿ ಮಧ್ಯಮ ವರ್ಗ ಹೆಚ್ಚು ಹೆಚ್ಚು ಈ ಹಬ್ಬವನ್ನು ಮಾಧ್ಯಮಗಳ, ಜ್ಯೋತಿಷಿಗಳ ಮುಖಾಂತರ ಪ್ರಚೋದನೆ ಹೊಂದಿ ಒಂದು ಪ್ರದರ್ಶನ ಹಬ್ಬವಾಗಿ ತಮ್ಮ ಶ್ರೀಮಂತಿಕೆಯ ಪ್ರದರ್ಶನಕ್ಕೆ ಅಥವಾ ಕಷ್ಟ ಪರಿಹಾರದ ಆಸೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಇದರಲ್ಲಿ ಭಕ್ತಿಗಿಂತ ಹೆಚ್ಚಾಗಿ ಬಹುತೇಕ ಪ್ರದರ್ಶನ ಮತ್ತು ಸ್ವಾರ್ಥ ಹಾಗೂ ದುರಾಸೆಯೇ ಹೆಚ್ಚು ಕಂಡುಬರುತ್ತದೆ.
ಆದರೆ ಲಕ್ಷ್ಮಿ ಎಂಬ ಪೌರಾಣಿಕ ದೇವತೆಯನ್ನು ಹೀಗೂ ಅರ್ಥೈಸಬಹುದು.
ಲಕ್ಷ್ಮಿ ಎಂಬುದು ಶ್ರಮದ ಸಂಕೇತ, ಲಕ್ಷ್ಮಿ ಎಂಬುದು ಪ್ರಾಮಾಣಿಕತೆಯ ಸಂಕೇತ,
ಲಕ್ಷ್ಮಿ ಎಂಬುದು ದಕ್ಷತೆಯ ಸಂಕೇತ, ಲಕ್ಷ್ಮಿ ಎಂಬುದು ಬುದ್ಧಿವಂತಿಕೆಯ ಸಂಕೇತ,
ಲಕ್ಷ್ಮಿ ಎಂಬುದು ವ್ಯಾವಹಾರಿಕತೆಯ ಸಂಕೇತ,
ಲಕ್ಷ್ಮಿ ಎಂಬುದು ಸಂಪತ್ತು, ಅಂತಸ್ತಿನ ಸಂಕೇತ.
ಅಂದರೆ ಮನುಷ್ಯ ಗುಣಗಳ ಈ ಸಾಮರ್ಥ್ಯ ಅಥವಾ ನಡವಳಿಕೆ ಅವರಿಗೆ ಲಕ್ಷ್ಮಿ ಒಳ್ಳೆಯದು ಮಾಡಲು ಇರುವ ಬಹುದೊಡ್ಡ ಸಾಧನ.
ಇದೇ ಪ್ರಮುಖವಾದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಒಂದು ವೈಚಾರಿಕ ಅರ್ಥ ಸಿಗುತ್ತದೆ. ಏಕೆಂದರೆ ಕೇವಲ ಭಕ್ತಿ ಪೂರ್ವಕವಾಗಿ ಹೂವು, ಹಣ್ಣು, ಕಾಯಿ, ಅರಿಶಿಣ, ಕುಂಕುಮ, ಸೀರೆ, ಪಂಚೆ, ಬೆಳ್ಳಿ, ಚಿನ್ನ, ವಜ್ರ ವೈಡೂರ್ಯ, ಹಣ ಇವುಗಳನ್ನು ಪ್ರದರ್ಶನಕ್ಕಿಟ್ಟು ಪೂಜೆ ಮಾಡುವುದು ಕೇವಲ ಆಚರಣೆ ಮಾತ್ರ. ಅದರಿಂದ ಒಂದಷ್ಟು ಮಾನಸಿಕ ತೃಪ್ತಿ, ಸಮಾಧಾನ ಸಿಗಬಹುದೇ ಹೊರತು ಸಂಪತ್ತಿನ ವೃದ್ಧಿಗೆ ಯಾವುದೇ ಕೊಡುಗೆ ಇರುವುದಿಲ್ಲ. ಅದೆಲ್ಲವೂ ಒಂದು ರೀತಿ ಕೃತಕ, ತೋರ್ಪಡಿಕೆಯ ಆಡಂಬರವಷ್ಟೇ.
ನಿಜಕ್ಕೂ ಮೇಲೆ ಹೇಳಿದ ಶ್ರಮ, ಶ್ರದ್ಧೆ, ಬುದ್ಧಿವಂತಿಕೆ, ಪ್ರಾಮಾಣಿಕತೆಯೇ ವರಮಹಾಲಕ್ಷ್ಮಿ ಹಬ್ಬದ ನಿಜವಾದ ನಡವಳಿಕೆಯಾಗಿ ಮಾರ್ಪಟ್ಟರೆ ಅದಕ್ಕಿಂತ ಒಳ್ಳೆಯ ಪ್ರತಿಫಲ ಮತ್ಯಾವುದೂ ಇರುವುದಿಲ್ಲ. ಇದನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಮಾಧ್ಯಮಗಳು ಭಕ್ತಿಯ ಹೆಸರಿನಲ್ಲಿ ಮೌಢ್ಯ ಬಿತ್ತುವುದು ಉತ್ತಮ ಬೆಳವಣಿಗೆಯಲ್ಲ. ಆಡಂಬರದ ತೋರಿಕೆಯೇ ಭಕ್ತಿಯಾದರೆ ಅದು ನಿಜಕ್ಕೂ ದುರಂತ. ಅದಕ್ಕೆ ಬದಲಾಗಿ ಶ್ರಮ, ಪ್ರಾಮಾಣಿಕತೆ ಮುನ್ನಲೆಗೆ ಬಂದರೆ ನಿಜಕ್ಕೂ ಅದೊಂದು ಹಬ್ಬವಾಗಿ ಸಾರ್ಥಕತೆ ಪಡೆಯುತ್ತದೆ.
ವರ ಮಹಾಲಕ್ಷ್ಮಿ – ಮೈದಾಸ – ಸರಸ್ವತಿ ಮತ್ತು ನಾವುಗಳು…
ಗ್ರೀಕ್ ಪುರಾಣ ಕಥೆಗಳಲ್ಲಿ ಮೈದಾಸನೆಂಬ ರಾಜನ ಹೆಸರು ಪ್ರಖ್ಯಾತವಾಗಿದೆ. ಆತ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಮೈದಾಸ ಸ್ಪರ್ಶ ( Golden touch ) ಎಂದೇ ಸದಾ ಯಶಸ್ವಿಯಾಗುವವರಿಗೆ ಕರೆಯಲಾಗುತ್ತದೆ……
ಅದರ ಬಗ್ಗೆ ಒಂದು ಕಥೆ ಇದೆ. ಒಬ್ಬಾತನಿಗೆ ದೇವರು ಪ್ರತ್ಯಕ್ಷವಾಗಿ ಏನು ವರ ಬೇಕು ಎಂದು ಕೇಳಿದಾಗ ದುರಾಸೆಗೆ ಬಿದ್ದ ಆತ ನಾನು ಮುಟ್ಟಿದ್ದೆಲ್ಲಾ ಚಿನ್ನವಾಗಲಿ ಎಂಬ ವರ ಕೇಳುತ್ತಾನೆ. ದೇವರು ತಥಾಸ್ತು ಎಂದು ಮರೆಯಾಗುತ್ತದೆ. ಮುಂದೆ ಆತ ಮುಟ್ಟಿದ ಹೆಂಡತಿ ಮಕ್ಕಳು, ಕೊನೆಗೆ ತಿನ್ನುವ ಅನ್ನವೂ ಚಿನ್ನವಾಗಿ ಆತ ಹಸಿವಿನಿಂದ ನರಳುವಂತಾಗುತ್ತದೆ…..
ಸದ್ಯದ ನಮ್ಮ ಸ್ಥಿತಿ ಇದನ್ನು ನೆನಪಿಸುತ್ತಿದೆ. ಮೂವತ್ತು ನಲವತ್ತು ವರ್ಷಗಳ ಹಿಂದೆ ಬಹುತೇಕ ನಾವುಗಳು ಅನ್ನಕ್ಕಾಗಿ ಪರಿತಪ್ಪಿಸುತ್ತಿದ್ದೆವು. ಅದೃಷ್ಟವಶಾತ್ ಇಂದು ಊಟ, ವಸತಿ, ಬಟ್ಟೆ ತಕ್ಕಮಟ್ಟಿಗೆ ಎಲ್ಲರಿಗೂ ಇದೆ. ಆದರೆ ದುರಾದೃಷ್ಟವಶಾತ್ ನಮ್ಮಲ್ಲಿ ಬಹುತೇಕರಿಗೆ ಚಿನ್ನವಿದೆ ಅನ್ನವಿಲ್ಲ ಅರ್ಥಾತ್ ಅನ್ನವಿದ್ದರು ಅದನ್ನು ಅನುಭವಿಸಿ ಹೊಟ್ಟೆ ತುಂಬ ತಿನ್ನುವ ಯೋಗವಿಲ್ಲ ಕಾರಣ ಅನಾರೋಗ್ಯ.
ಸರಸ್ವತಿಯನ್ನು ( ಜ್ಞಾನವನ್ನು ) ಮರೆತು ಕೇವಲ ಲಕ್ಷ್ಮಿಯ ಹಿಂದೆ ಬಿದ್ದ ಪರಿಣಾಮವಿದು.
ಕಾಯಕವೇ ಕೈಲಾಸ ತತ್ವದ ವಿರುದ್ಧ ದಿಕ್ಕಿನಲ್ಲಿ ಹಣ ಮಾಡುವ ತಂತ್ರಗಾರಿಕೆಗೆ ನಾವುಗಳು ಶರಣಾಗಿದ್ದೇವೆ. ಅನಾರೋಗ್ಯ, ಆತ್ಮಹತ್ಯೆ, ಅಪಘಾತ, ಅಪರಾಧ ಎಂಬ ಸಾವುಗಳು ಒತ್ತಡದ ಬದುಕಿನ ಪರಿಣಾಮ ನಮ್ಮನ್ನು ಆವರಿಸಿವೆ…..
ಆದ್ದರಿಂದ ಈ ವರ ಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಒಂದಷ್ಟು ಆತ್ಮಾವಲೋಕನದ ಅವಶ್ಯಕತೆ ಇದೆ.
” ಸಾಕು ಎಂಬುವವನು ಶ್ರೀಮಂತ – ಬೇಕು ಎಂಬುವವನು ಬಡವ ” ಎಂಬ ನುಡಿ ಮಾತಿನ ನಿಜವಾದ ಒಳ ಅರ್ಥವನ್ನು ಅರಿತುಕೊಂಡು ಅದನ್ನು ಅಳವಡಿಸಿಕೊಳ್ಳಬೇಕಿದೆ…….
ಸಂಪ್ರದಾಯ ಮತ್ತು ಆಚರಣೆಗಳಲ್ಲಿ ಒಂದಿಷ್ಟು ಮೌಢ್ಯ ತುಂಬಿದ್ದರು ಹಬ್ಬಗಳು ನಮ್ಮ ಸಮಾಜದ
ಬಹುಮುಖ್ಯ ಸಂಭ್ರಮಗಳು.
ಸ್ವಲ್ಪ ಹಿಂದಿನವರೆಗೂ ಹಬ್ಬಗಳು ರುಚಿಯಾದ ಊಟ ಮತ್ತು ಹೊಸ ಬಟ್ಟೆಗಳಿಗೆ ಆಕರ್ಷಕ ಸಮಯವಾಗಿತ್ತು. ಆದರೆ ಆಧುನಿಕತೆಯ ಭರದಲ್ಲಿ ಅದು ಇಂದು ಶಿಥಿಲವಾಗಿ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುವ ಹಂತದಲ್ಲಿವೆ. ಕೇವಲ ಕಾಟಾಚಾರದ, ತೋರಿಕೆಯ ಪ್ರದರ್ಶನವಾಗಿದೆ…….
ಎಲ್ಲದರಲ್ಲಿಯೂ ಬದಲಾವಣೆಗಳಾಗುತ್ತಿರುವ ಈ ಕಾಲ ಘಟ್ಟದಲ್ಲಿ ಹಬ್ಬಗಳಲ್ಲಿಯೂ ಒಂದಷ್ಟು ಆಧುನಿಕತೆಯ ಆಚರಣೆಗಳನ್ನು ಅಳವಡಿಸಿಕೊಂಡರೆ ನಿಜಕ್ಕೂ ಮತ್ತೆ ಅದು ತನ್ನ ನಿಜ ಅರ್ಥದ ಸಂತೋಷ ಸಂಭ್ರಮಗಳ ಕೂಟಗಳಾಗಿ ಮಾರ್ಪಡಬಹುದು…….
ಬಹುತೇಕರಲ್ಲಿ ಈಗ ಊಟ, ಬಟ್ಟೆಗಳ ಸಂಭ್ರಮ ಅಷ್ಟಾಗಿ ಉಳಿದಿಲ್ಲ. ಎಲ್ಲಾ ರೀತಿಯ ಊಟ, ಬಟ್ಟೆಗಳು ಎಲ್ಲಾ ಸಂದರ್ಭದಲ್ಲಿಯೂ ಲಭ್ಯವಿದೆ. ಅದಕ್ಕಾಗಿ ಹಬ್ಬಗಳಿಗಾಗಿ ಕಾಯುವ ಸ್ಥಿತಿ ಇಲ್ಲ. ಆದರೆ ನಿಜವಾಗಿ ಕಾಣೆಯಾಗಿರುವುದು ಸ್ನೇಹ, ಪ್ರೀತಿ, ವಿಶ್ವಾಸ , ಆತ್ಮೀಯ ವಾತಾವರಣ ಮತ್ತು ಮಾನವೀಯ ಮೌಲ್ಯಗಳು.
ಅದನ್ನು ಪುನರ್ ಸ್ಥಾಪಿಸಲು ಹಬ್ಬಗಳನ್ನು ವೇದಿಕೆ ಮಾಡಿಕೊಳ್ಳಬಹುದು……
ಹೇಗೆ ವಿವಿಧ ಕಾರಣಗಳಿಗಾಗಿ
ಆಧುನಿಕ ಪಾರ್ಟಿಗಳನ್ನು ಆಯೋಜಿಸಲಾಗುತ್ತದೋ ಹಾಗೆ ಹಬ್ಬಗಳನ್ನು ಆತ್ಮೀಯರ, ಗೆಳೆಯರ, ಬಂಧುಗಳ ಸ್ನೇಹಕೂಟಗಳಾಗಿ ಮಾರ್ಪಡಿಸಿ ಮನಸ್ಸಿಗೆ ಮುದ ನೀಡುವಂತೆ ಮಾಡಿಕೊಳ್ಳಬಹುದು…..
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ದಿನ ಹಿರಿಯರೊಂದಿಗೆ ಚಿಂತನ – ಮಂಥನ, ಮಕ್ಕಳಿಗೆ ಒಂದಷ್ಟು ಆಟಗಳು, ಭವಿಷ್ಯದ ಯೋಜನೆಗಳನ್ನು ಮನೆಯ ಒಳಗೇ ಚರ್ಚಿಸುವ ಒಂದು ವೇದಿಕೆ ಸೃಷ್ಟಿಸಬಹುದು……
ಅಲ್ಲದೆ ಆರ್ಥಿಕವಾಗಿ ತೀರಾ ಕೆಳಸ್ತರದ, ಹಬ್ಬದ ಊಟಕ್ಕೆ ಆಸೆಪಡುವ ಒಂದಷ್ಟು ನಮ್ಮ ಸುತ್ತಮುತ್ತಲ ಬಡವರಿಗೆ ಒಳ್ಳೆಯ ಹಬ್ಬದೂಟ ಹಾಕುವ ಸ್ವಯಂ ತೃಪ್ತಿಯ ಕೆಲಸವನ್ನು ಮಾಡಬಹುದು. ಆಗ ಹಬ್ಬಗಳ ಮಹತ್ವ ಹೆಚ್ಚಾಗಿ ಆತ್ಮತೃಪ್ತಿಯ ಜೊತೆಗೆ ಮುಂದಿನ ಹಬ್ಬಕ್ಕೆ ಕಾಯುವ ಸಂತಸ ಉಳಿಯುತ್ತದೆ…….
ಇಲ್ಲದಿದ್ದರೆ ಹಬ್ಬಗಳು ಒಣ ಆಚರಣೆಗಳಿಂದ ತಮ್ಮ ಪ್ರಾಮುಖ್ಯತೆ ಕಳೆದುಕೊಳ್ಳಬಹುದು.
ಟಿವಿ ಜ್ಯೋತಿಷಿಗಳ ಎಡಬಿಡಂಗಿತನದಿಂದ ತೀರಾ ಜೊಳ್ಳಾಗಬಹುದು ಮತ್ತು ಕುಟುಂಬ ವ್ಯವಸ್ಥೆ ಒಂದು ವ್ಯಾಪಾರಿ ಸಂಸ್ಥೆಯಾಗಿ ಬದಲಾಗಬಹುದು…..
ಇದು ಅವರವರ ಅನುಕೂಲಗಳನ್ನು ಅವಲಂಭಿಸಿರುತ್ತದೆ. ನನ್ನ ಆಶಯ ಮತ್ತು ಅನಿಸಿಕೆ ಅಷ್ಟೆ…….
ಎಲ್ಲರಿಗೂ ಹಬ್ಬದ ಶುಭಾಶಯಗಳು…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ