
ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ. ಆದರೆ, ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಗೊಂಡನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಅಗತ್ಯ ಮೂಲಸೌಕರ್ಯಗಳೇ ಇಲ್ಲದೆ, ಕಿರಿದಾದ ಬಾಡಿಗೆ ಮನೆಯಲ್ಲಿ ಒಬ್ಬರ ಮೇಲೊಬ್ಬರು ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು 30 ಮಕ್ಕಳು ಕಲಿಯುತ್ತಿರುವ ಈ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿದ್ದರೂ, ಅದು ವರ್ಷಗಳಿಂದ ಅರ್ಧಕ್ಕೆ ನಿಂತಿದೆ. ಹೀಗಾಗಿ ಮಕ್ಕಳನ್ನು ಸದ್ಯ ಕಿರಿದಾದ ಬಾಡಿಗೆ ಮನೆಯೊಂದರಲ್ಲಿ ಕೂರಿಸಿ ಅಂಗನವಾಡಿ ನಡೆಸಲಾಗುತ್ತಿದೆ.
ಸೂಕ್ತ ಗಾಳಿ, ಬೆಳಕು, ಕುಳಿತುಕೊಳ್ಳಲು ಸ್ಥಳ, ಊಟ ಮಾಡಲು ವ್ಯವಸ್ಥೆ ಸೇರಿದಂತೆ ಮಕ್ಕಳ ಕಲಿಕೆಗೆ ಅಗತ್ಯವಾದ ವಾತಾವರಣ ಇಲ್ಲದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೋರ್ಡ್ ಇಲ್ಲ, ಊಟಕ್ಕೂ ಜಾಗವಿಲ್ಲ
ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳಿಗೆ ಪಾಠ ಮಾಡಲು ಸೂಕ್ತ ಬೋರ್ಡ್ ವ್ಯವಸ್ಥೆಯೂ ಇಲ್ಲ. ಮಕ್ಕಳು ಕುಳಿತುಕೊಳ್ಳಲು ಹಾಗೂ ಊಟ ಮಾಡಲು ಸಾಕಷ್ಟು ಸ್ಥಳಾವಕಾಶವಿಲ್ಲ. ತಿಂಗಳಿಗೆ ಒಮ್ಮೆ ಗರ್ಭಿಣಿಯರಿಗೆ ಆಹಾರ ಸಾಮಗ್ರಿ ವಿತರಿಸುವ ಸಂದರ್ಭದಲ್ಲಂತೂ ಕೇಂದ್ರದಲ್ಲಿ ಮತ್ತಷ್ಟು ಸ್ಥಳಾವಕಾಶದ ಸಮಸ್ಯೆ ಎದುರಾಗುತ್ತದೆ.
ನಮ್ಮ ಮಕ್ಕಳು ಕಲಿಯಲಿ ಎಂಬ ಉದ್ದೇಶದಿಂದ ಸರ್ಕಾರಿ ಅಂಗನವಾಡಿಗೆ ಕಳುಹಿಸುತ್ತಿದ್ದೇವೆ. ಆದರೆ, ಇಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲೂ ಜಾಗವಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮಕ್ಕಳ ಕಲಿಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಕೆಲ ಪೋಷಕರು ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸುವ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಳೆಗೆ ಕುಸಿದ ಕಟ್ಟಡ; ಹೊಸ ಕಟ್ಟಡವೂ ಅರ್ಧಕ್ಕೆ
ಗ್ರಾಮದಲ್ಲಿದ್ದ ಹಳೆಯ ಅಂಗನವಾಡಿ ಕಟ್ಟಡ ಮಳೆಯಿಂದ ಹಾನಿಗೊಳಗಾದ ಹಿನ್ನೆಲೆಯಲ್ಲಿ ನಾಲ್ಕೈದು ವರ್ಷಗಳ ಹಿಂದೆ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಪ್ರಾಥಮಿಕ ಶಾಲಾ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಪಾಯ ಹಾಕಿ ಕಾಮಗಾರಿ ಆರಂಭಿಸಿದರೂ, ಅನುದಾನ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ.
ಗ್ರಾಮಸ್ಥರ ಪ್ರಕಾರ, ಕಾಮಗಾರಿ ಆರಂಭದ ಹಂತದಲ್ಲಿಯೇ ಗುಣಮಟ್ಟದ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಅಡಿಪಾಯದಲ್ಲಿ ಅಗತ್ಯ ಪ್ರಮಾಣದ ಕಲ್ಲು ಬಳಸದೆ ಜಲ್ಲಿಕಲ್ಲು ಹಾಕಲಾಗಿದೆ ಹಾಗೂ ಹಳೆಯ ಸಂಪಿಗೆ ತೇಪೆ ಹಾಕಿ ಹೊಸ ಸಂಪಿನ ಬಿಲ್ ಮಾಡಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಕಟ್ಟಡದ ಮೋಲ್ಡ್ ಕಾಮಗಾರಿ ನಡೆದಿದ್ದರೂ ಮುಂದಿನ ಕಾಮಗಾರಿಗಳು ಪೂರ್ಣಗೊಂಡಿಲ್ಲ.
17.50 ಲಕ್ಷ ಬಿಲ್ ಮಾಡಿಕೊಂಡು ಕಾಮಗಾರಿ ಸ್ಥಗಿತ?
ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಿರ್ಮಿತಿ ಕೇಂದ್ರ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳಿಂದ ಒಟ್ಟು 17.50 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಳಿಸದೆ ಹಣವನ್ನು ಬಿಲ್ ಮಾಡಿಕೊಂಡು ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಗ್ರಾಮದ ಯುವಕರು ಆರೋಪಿಸಿದ್ದಾರೆ.
ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾಮಗಾರಿಯ ಗುಣಮಟ್ಟ ಹಾಗೂ ಖರ್ಚಾಗಿರುವ ಅನುದಾನದ ಕುರಿತು ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದ ಯುವಕ ಹರೀಶ್ ಕುಮಾರ್ ಮಾತನಾಡಿ, ಹಲವು ವರ್ಷಗಳಿಂದ ಮಕ್ಕಳಿಗೆ ಸುಸಜ್ಜಿತ ಅಂಗನವಾಡಿ ಕಟ್ಟಡವಿರಲಿಲ್ಲ. ಹೊಸ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಕಳಪೆ ಕಾಮಗಾರಿ ನಡೆಸಿ ಹಣ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಅನುಮಾನವಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಅನುಮತಿ ನೀಡಿದರೆ ನಾವೇ ಕಟ್ಟುತ್ತೇವೆ
ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸದಿದ್ದರೆ ಗ್ರಾಮಸ್ಥರು ಹಾಗೂ ಯುವಕರು ಸ್ವಂತ ಖರ್ಚಿನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮಕ್ಕಳ ಹಿತದೃಷ್ಟಿಯಿಂದ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದರೆ ಗ್ರಾಮಸ್ಥರೆಲ್ಲರೂ ಸೇರಿ ಸ್ವಂತ ಖರ್ಚಿನಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಕಟ್ಟಡ ಉದ್ಘಾಟನೆಗೆ ರಾಜಕಾರಣಿಗಳು ಅಥವಾ ಅಧಿಕಾರಿಗಳನ್ನು ಆಹ್ವಾನಿಸದೆ ಮಕ್ಕಳಿಂದಲೇ ಉದ್ಘಾಟನೆ ಮಾಡಿಸುತ್ತೇವೆ ಎಂದು ಯುವಕರು ಎಚ್ಚರಿಸಿದ್ದಾರೆ.
ಸರ್ಕಾರ ಸರ್ಕಾರಿ ಶಿಕ್ಷಣ ವ್ಯವಸ್ಥೆಯತ್ತ ಮಕ್ಕಳನ್ನು ಸೆಳೆಯಲು ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿರುವ ಸಂದರ್ಭದಲ್ಲಿ, ತಿರುಮಗೊಂಡನಹಳ್ಳಿಯ ಅಂಗನವಾಡಿ ಕೇಂದ್ರದ ಅವ್ಯವಸ್ಥೆ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ.
ಪುಟ್ಟ ಮಕ್ಕಳ ಕಲಿಕೆ, ಆರೋಗ್ಯ ಹಾಗೂ ಸುರಕ್ಷತೆಗೆ ಪೂರಕವಾದ ಸುಸಜ್ಜಿತ ವಾತಾವರಣ ಕಲ್ಪಿಸುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ.
ಅರ್ಧಕ್ಕೆ ನಿಂತಿರುವ ಕಟ್ಟಡ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ? 17.50 ಲಕ್ಷ ಅನುದಾನದ ಬಳಕೆ ಕುರಿತು ತನಿಖೆ ನಡೆಯಲಿದೆಯೇ? ಕಳಪೆ ಕಾಮಗಾರಿ ಆರೋಪಗಳಿಗೆ ಅಧಿಕಾರಿಗಳು ಉತ್ತರ ನೀಡಲಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆ ಸ್ಪಷ್ಟ ಉತ್ತರ ನೀಡಬೇಕಿದೆ.

ತಿರುಮಗೊಂಡನಹಳ್ಳಿ ಅಂಗನವಾಡಿ ಕಟ್ಟಡದ ಕಾಮಗಾರಿಯನ್ನು ಇನ್ನೂ 15 ದಿನಗಳೊಳಗೆ ಪೂರ್ಣಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಕಂಡುಬಂದಿದೆಯೇ, ಯಾವ್ಯಾವ ಇಲಾಖೆಗಳಿಂದ ಎಷ್ಟೆಷ್ಟು ಅನುದಾನ ಬಿಡುಗಡೆಯಾಗಿದೆ ಹಾಗೂ ಬಿಡುಗಡೆಯಾದ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಲಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುವುದು. ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಾ.ಪಂ. ಇಒ ಮಂಜುನಾಥ ಹರತಿ ಹೇಳಿದ್ದಾರೆ.
ಅಂಗನವಾಡಿ ಕಟ್ಟಡಕ್ಕೆ ಪ್ಲಾಸ್ಟಿಂಗ್ ಕಾಮಗಾರಿಯನ್ನು ನಾನು ಸ್ವಂತ ಹಣ ಖರ್ಚು ಮಾಡಿ ಮಾಡಿಸಿದ್ದೇನೆ. ಆದರೆ, ಆ ಕಾಮಗಾರಿಗೆ ಸಂಬಂಧಿಸಿದ ಹಣವನ್ನು ಇದುವರೆಗೆ ಪಾವತಿಸಿಲ್ಲ. ಈ ಬಗ್ಗೆ ಪಿಡಿಒ ಅವರನ್ನು ಕೇಳಿದಾಗ ಸದ್ಯ ಯಾವುದೇ ಅನುದಾನ ಇಲ್ಲ, ಅನುದಾನ ಬಂದ ಬಳಿಕ ನೋಡೋಣ ಎಂದು ತಿಳಿಸಿದ್ದಾರೆ ಎಂದು ಕಾಂಟ್ರಾಕ್ಟರ್ ಮುನಿರಾಜ್ ಹೇಳಿದ್ದಾರೆ
ಅಂಗನವಾಡಿ ಕಟ್ಟಡ ಕಾಮಗಾರಿ ವಿಳಂಬದ ಕುರಿತು ಮಾಹಿತಿ ಪಡೆಯಲು ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಪಿಡಿಒ ಅವರು ಕರೆ ಸ್ವೀಕರಿಸದ ಕಾರಣ ಅವರ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.