ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ ಸಮಾಜದ ಎಲ್ಲರ ಸಹಕಾರ ಅಗತ್ಯ ಎಂದು ರಾಜಘಟ್ಟ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎ. ಶಿವಕುಮಾರ್ ಹೇಳಿದರು.

ತಾಲ್ಲೂಕಿನ ರಾಜಘಟ್ಟ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.

ಪುಟಾಣಿ ಮಕ್ಕಳು ದೇಶದ ಆಸ್ತಿಯಾಗಿದ್ದು, ಅವರ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರು, ಪೋಷಕರು ಹಾಗೂ ಸಮಾಜದ ಮೇಲಿದೆ. ವಿದ್ಯಾವಂತ ಹಾಗೂ ಜವಾಬ್ದಾರಿಯುತ ಮಕ್ಕಳಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಹೀಗಾಗಿ ಮಕ್ಕಳ ಶಿಕ್ಷಣದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದರು.

ಮಕ್ಕಳು ದೇಶದ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ತಿಳಿದುಕೊಳ್ಳಬೇಕು. ಬ್ರಿಟಿಷರ ಆಳ್ವಿಕೆಯಿಂದ ಭಾರತಕ್ಕೆ ಸುಲಭವಾಗಿ ಸ್ವಾತಂತ್ರ್ಯ ದೊರೆತಿಲ್ಲ. ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿ ನಾವು ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಹಿರಿಯರು ನಮಗೆ ನೀಡಿರುವ ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ದೇಶಭಕ್ತಿ ಗೀತೆಗಳು ಹಾಗೂ ವಿದ್ಯಾರ್ಥಿಗಳ ವಿವಿಧ ಪ್ರತಿಭಾ ಪ್ರದರ್ಶನಗಳು ನೆರೆದಿದ್ದವರ ಗಮನ ಸೆಳೆದವು.

ಈ ವೇಳೆ ಸ್ಥಳೀಯ ಮುಖಂಡರಾದ ರವೀಶ್, ಶಿವಕುಮಾರ್ ಆರ್.ಸಿ., ಆರ್.ಎ. ಶಿವಕುಮಾರ್, ಯುವ ಮುಖಂಡ ಆರ್.ಎ. ಸುನೀಲ್, ವಿನೋದ್, ಮಾಜಿ ಅಧ್ಯಕ್ಷ ಆರ್.ಜಿ. ಮುನಿರಾಜು, ಆಂಜನೇಯ, ಕಾಂತಮ್ಮ, ಪ್ರಭಾ, ಆಶಾ, ವೀಣಾ, ಪದ್ಮ, ಶ್ಯಾಮಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!