ವಿಬಿ ಜಿ ರಾಮ್ ಜಿ: ಆ.15 ರಿಂದ ಜಾಬ್ ಕಾರ್ಡ್ ಮೇಳ

ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ (ವಿಬಿ ಜಿ ರಾಮ್ ಜಿ) ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ ತಾಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ ಮತ್ತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉದ್ಯೋಗ ಚೀಟಿ ಹೊಂದಿಲ್ಲದ ಅರ್ಹ ಗ್ರಾಮೀಣ ಕುಟುಂಬಗಳಿಗೆ ಸ್ಥಳದಲ್ಲೇ ಪರಿಶೀಲಿಸಿ ಹೊಸ ಜಾಬ್ ಕಾರ್ಡ್‌ಗಳನ್ನು ನೀಡಲಾಗುವುದು. ಅರ್ಹ ಫಲಾನುಭವಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಆಧಾರ್ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌, ಪಡಿತರ ಚೀಟಿ ಸಲ್ಲಿಸಿ ಹೊಸದಾಗಿ ಉದ್ಯೋಗ ಚೀಟಿ ಪಡೆಯಬಹುದು.

ಈಗಾಗಲೇ ಜಾಬ್ ಕಾರ್ಡ್ ಹೊಂದಿದ್ದು, ಇ-ಕೆವೈಸಿ ಪ್ರಕ್ರಿಯೆ ಬಾಕಿ ಇರುವವರು ಈ ಅಭಿಯಾನದ ಮೂಲಕ ತಕ್ಷಣವೇ ಇ-ಕೆವೈಸಿ ಪೂರ್ಣಗೊಳಿಸಬಹುದು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಿಶೇಷ ಚೇತನರು, ಮಹಿಳಾ ನೇತೃತ್ವದ ಕುಟುಂಬಗಳು ಮತ್ತು ಭೂ ರಹಿತ ಕೂಲಿ ಕಾರ್ಮಿಕರಿಗೆ ಆದ್ಯತೆ ಮೇರೆಗೆ ಕಾರ್ಡ್ ವಿತರಿಸಲಾಗುವುದು.

ಈ ಬಗ್ಗೆ ಪಿಡಿಒ ಹಾಗೂ ಐ.ಇ.ಸಿ ಸಂಯೋಜಕರು ಗ್ರಾ.ಪಂ. ಸಿಬ್ಬಂದಿ, ಬಿ ಎಫ್ ಟಿಗಳು ಗ್ರಾಮ ಕಾಯಕ ಮಿತ್ರರು, ಟಿ ಆರ್ ಎಂ ಗಳು ಮನೆ-ಮನೆಗೆ ಭೇಟಿ ನೀಡಿ ನಿಷ್ಕ್ರಿಯ ಕಾರ್ಡ್‌ಗಳನ್ನು ಗುರುತಿಸಿ, ಜನರಲ್ಲಿ ಉದ್ಯೋಗದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

ಈ ಯೋಜನೆಯಡಿ ವಾರ್ಷಿಕ ಉದ್ಯೋಗದ ಅವಧಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ದಿನದ ಕೂಲಿ ಮೊತ್ತವನ್ನೂ 370 ರೂ. ರಿಂದ 382 ರೂ.ಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಜನರು ಈ ಯೋಜನೆಯಡಿ ದೊರಕುವ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!