ರೈತರ ಜಮೀನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್


ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಯಾವುದೇ ರೈತರ ಜಮೀನನ್ನೂ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಜಮೀನು ನೀಡಲು ಇಚ್ಛಿಸದ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಎಂದಿನಂತೆ ಮುಂದುವರಿಸಬಹುದು ಎಂದು ಅವರು ಭರವಸೆ ನೀಡಿದ್ದಾರೆ.

ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಯೋಜನೆಯ ಇತಿಹಾಸ ಹಾಗೂ ಅಧಿಕೃತ ದಾಖಲೆಗಳನ್ನು ಪ್ರಸ್ತುತಪಡಿಸಿ ಸರ್ಕಾರದ ನಿಲುವನ್ನು ವಿವರಿಸಿದರು.

“ಯಾರಿಗೆ ಜಮೀನು ನೀಡಲು ಇಷ್ಟವಿಲ್ಲವೋ ಅವರು ತಮ್ಮ ಜಮೀನಿನಲ್ಲಿ ಕೃಷಿ ಮಾಡಿಕೊಂಡೇ ಇರಬಹುದು. ಯಾರು ಸ್ವಇಚ್ಛೆಯಿಂದ ಭೂಮಿ ನೀಡಲು ಸಿದ್ಧರಿದ್ದಾರೋ ಅವರು ಸರ್ಕಾರಕ್ಕೆ ಒಪ್ಪಿಸಿ ಪರಿಹಾರ ಪಡೆಯಬಹುದು. ಆದರೆ ಒಂದು ಗುಂಟೆ ಜಮೀನನ್ನೂ ಬಲವಂತವಾಗಿ ಕಿತ್ತುಕೊಳ್ಳುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಯೋಜನೆಯ ಸಾಧಕ-ಬಾಧಕಗಳು, ರೈತರ ಅಭಿಪ್ರಾಯಗಳು ಹಾಗೂ ಆತಂಕಗಳನ್ನು ಪರಿಶೀಲಿಸಲು ವಿಶೇಷ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು. ಸಮಿತಿಯ ವರದಿ ಬಂದ ಬಳಿಕ ಮುಂದಿನ ನಿರ್ಧಾರವನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದರು. ಜಮೀನು ನೀಡದ ರೈತರ ಭೂಮಿಯ ಯಥಾಸ್ಥಿತಿಯನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ಭರವಸೆ ನೀಡಿದರು.

ಬಿಡದಿಯಲ್ಲಿ ಜಮೀನು ಸರ್ವೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಕೆಲವರು ರಾಜಕೀಯ ಪ್ರೇರಣೆಯಿಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದು, ರೈತರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆ ತಮ್ಮ ಕನಸಿನ ಯೋಜನೆಯಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಈ ಯೋಜನೆಯನ್ನು ನಾನು ಆರಂಭಿಸಿಲ್ಲ. ಹಿಂದಿನ ಸರ್ಕಾರಗಳು ರೂಪಿಸಿದ್ದ ಯೋಜನೆಯನ್ನು ಮಾತ್ರ ಮುಂದುವರಿಸುತ್ತಿದ್ದೇನೆ. ನಾನು ಕೂಡ ಒಬ್ಬ ರೈತನ ಮಗ. ರೈತರ ಕಷ್ಟ ನನಗೆ ಗೊತ್ತು. ರೈತರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕೆಲಸ ಮಾಡುವುದಿಲ್ಲ,” ಎಂದು ಹೇಳಿದರು.

ಯೋಜನೆಯ ಹಿನ್ನೆಲೆಯನ್ನು ವಿವರಿಸಿದ ಅವರು, ಯೋಜನಾ ಪ್ರದೇಶವನ್ನು ಈ ಹಿಂದೆ ‘ರೆಡ್ ಝೋನ್’ ಎಂದು ಘೋಷಿಸಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿತ್ತು. ಬಿಡಿಎ ಅನುಮೋದನೆ ಇಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅವಕಾಶ ಇರಲಿಲ್ಲ. 2007ರಲ್ಲಿ ಮಾರಂಡಹಳ್ಳಿ, ಒಡೆಯರಹಳ್ಳಿ ಸೇರಿದಂತೆ ಹಲವು ಗ್ರಾಮಗಳನ್ನು ಯೋಜನಾ ವ್ಯಾಪ್ತಿಗೆ ಸೇರಿಸಲಾಗಿತ್ತು ಎಂದು ತಿಳಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಗ್ರಾಮಠಾಣ ಸೇರಿದಂತೆ ಆಸ್ತಿಗಳಿಗೆ ಪರಿಹಾರ ನಿಗದಿಪಡಿಸಿ, ಖಾಸಗಿ ಡೆವಲಪರ್ ಡಿಎಲ್‌ಎಫ್ ಕಂಪನಿಯಿಂದ 400 ಕೋಟಿ ರೂ. ಭದ್ರತಾ ಠೇವಣಿ ಪಡೆದು ಯೋಜನೆಗೆ ಅನುಮತಿ ನೀಡಲಾಗಿತ್ತು. 2010ರಲ್ಲಿಯೂ ಇದೇ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಮುಂದುವರಿಸಿ ಜಾಗತಿಕ ಟೆಂಡರ್ ಆಹ್ವಾನಿಸಲಾಗಿತ್ತು ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಶಾಸಕ ಬಾಲಕೃಷ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!