
ಎಲ್-ನಿನೋ ಪರಿಣಾಮದಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆ, ತಾಪಮಾನದ ಏರಿಕೆ ಹಾಗೂ ಒಣ ಹವಾಮಾನ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತೋಟಗಾರಿಕಾ ಬೆಳೆಗಳ ಸಂರಕ್ಷಣೆಗೆ ರೈತರು ಮುಂಚಿತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಎಲ್-ನಿನೋ ಸಾಮಾನ್ಯವಾಗಿ ದುರ್ಬಲ ನೈಋತ್ಯ ಮಾನ್ಸೂನ್, ಅನಿಯಮಿತ ಮಳೆ ಹಾಗೂ ದೀರ್ಘಾವಧಿಯ ಒಣ ಹವಾಮಾನಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಮಳೆ ಆಧಾರಿತ ತೋಟಗಾರಿಕಾ ಬೆಳೆಗಳಲ್ಲಿ ತೇವಾಂಶದ ಕೊರತೆ ಉಂಟಾಗಿ ಹೂ ಬಿಡುವಿಕೆ, ಕಾಯಿ ಕಟ್ಟುವಿಕೆ ಹಾಗೂ ಇಳುವರಿಯ ಮೇಲೆ ನೇರ ಪರಿಣಾಮ ಬೀಳುತ್ತದೆ. ಜೊತೆಗೆ ಕೀಟ ಹಾಗೂ ರೋಗಗಳ ಉಲ್ಬಣದಿಂದ ರೈತರಿಗೆ ಆರ್ಥಿಕ ನಷ್ಟವೂ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳೂ ಪೂರ್ವ ಒಣವಲಯಕ್ಕೆ ಸೇರಿದ್ದು, ಇಲ್ಲಿ ಮಾವು, ದ್ರಾಕ್ಷಿ, ಸೀಬೆ, ಬಾಳೆ, ದಾಳಿಂಬೆ ಸೇರಿದಂತೆ ವಿವಿಧ ಹಣ್ಣಿನ ಬೆಳೆಗಳು, ಟೊಮ್ಯಾಟೊ, ಬದನೆ, ಕಡ್ಡಿಬೀನ್ಸ್, ಎಲೆಕೋಸು, ಹೂಕೋಸು, ಕುಂಬಳ ವರ್ಗದ ತರಕಾರಿಗಳು, ಗುಲಾಬಿ, ಸೇವಂತಿಗೆ, ಸುಗಂಧರಾಜ ಹೂ ಬೆಳೆಗಳು ಹಾಗೂ ತೆಂಗು, ಅಡಿಕೆ ಮೊದಲಾದ ತೋಟದ ಬೆಳೆಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಈ ಎಲ್ಲ ಬೆಳೆಗಳು ಎಲ್-ನಿನೋ ಪರಿಣಾಮಕ್ಕೆ ಹೆಚ್ಚು ತುತ್ತಾಗುವ ಸಾಧ್ಯತೆ ಇರುವುದರಿಂದ ಸೂಕ್ತ ಮುನ್ನೆಚ್ಚರಿಕೆ ಅಗತ್ಯವಾಗಿದೆ.

ತೇವಾಂಶ ಸಂರಕ್ಷಣೆಗೆ ಆದ್ಯತೆ :
ಬಹುವಾರ್ಷಿಕ ಬೆಳೆಗಳಲ್ಲಿ ಗಿಡಗಳ ಬುಡದ ಸುತ್ತ ತೆಂಗಿನ ಗರಿ, ನಾರು, ಮಟ್ಟೆ ಹಾಗೂ ಇತರೆ ಸಾವಯವ ತ್ಯಾಜ್ಯಗಳನ್ನು ಮಲ್ಚಿಂಗ್ ರೂಪದಲ್ಲಿ ಹಾಸುವುದರಿಂದ ಮಣ್ಣಿನ ತೇವಾಂಶ ಕಾಪಾಡಬಹುದು. ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಬೆಳೆಯ ಅವಶ್ಯಕತೆಗೆ ಅನುಗುಣವಾಗಿ ನೀರುಣಿಸಬೇಕಿದೆ.
ಬಿಸಿಲಿನ ತಾಪದಿಂದ ಬೆಳೆಗಳ ರಕ್ಷಣೆ:
ಅತಿಯಾದ ಬಿಸಿಲಿನಿಂದ ಎಲೆಗಳ ಮೂಲಕ ನೀರಿನ ನಷ್ಟ ಕಡಿಮೆ ಮಾಡಲು ಸೂಕ್ತ ಎಲೆ ಸಿಂಪಡಣೆ, ಸುಣ್ಣದ ಧೂಳೀಕರಣ ಅಥವಾ ಸಿಂಪಡಣೆ ಕೈಗೊಳ್ಳಬೇಕು. ಬರ ನಿರೋಧಕತೆ ಹೆಚ್ಚಿಸಲು 0.2 ಶೇಕಡಾ ಪೊಟ್ಯಾಶಿಯಂ ಸಲ್ಫೇಟ್ ಸಿಂಪಡಣೆ ಹಾಗೂ ಅಗತ್ಯವಿದ್ದಲ್ಲಿ ಶೇ.30–40 ರಷ್ಟು ರೆಂಬೆಗಳನ್ನು ಕಪಾತ್ ಮಾಡು ಮೂಲಕ ಎಲೆಗಳ ವಿಸ್ತೀರ್ಣ ಕಡಿಮೆ ಮಾಡಿ ತೇವಾಂಶ ನಷ್ಟವನ್ನು ನಿಯಂತ್ರಿಸಬಹುದು.

ತರಕಾರಿ ಬೆಳೆಗಳಲ್ಲಿ ವಿಶೇಷ ಕಾಳಜಿ:
ತರಕಾರಿ ನಾಟಿ ವೇಳೆ ಹನಿ ನೀರಾವರಿ ಹಾಗೂ ಪ್ಲಾಸ್ಟಿಕ್ ಮಲ್ಚಿಂಗ್ ಅಳವಡಿಸಿಕೊಳ್ಳಬೇಕು. ಪ್ಲಾಸ್ಟಿಕ್ ಹೊದಿಕೆ ಮತ್ತು ಸಸಿಗಳ ಸಂಪರ್ಕ ತಪ್ಪಿಸಲು ಪೇಪರ್ ಕಪ್ಗಳನ್ನು ಬಳಸಿ ನಾಟಿ ಮಾಡುವುದು ಉತ್ತಮ. ಕಡಿಮೆ ವೆಚ್ಚದಲ್ಲಿ ನೆರಳು ಪರದೆ ಅಥವಾ ನಿರುಪಯುಕ್ತ ಬಟ್ಟೆಗಳನ್ನು ಅಳವಡಿಸುವ ಮೂಲಕ ಬಿಸಿಲಿನ ತೀವ್ರತೆಯಿಂದ ಬೆಳೆಗಳನ್ನು ರಕ್ಷಿಸಬಹುದು.
ತರಕಾರಿ ಬೆಳೆಗಳಲ್ಲಿ ಹೂ ಉದುರುವಿಕೆ ತಡೆಗಟ್ಟಲು 40 ಪಿಪಿಎಂ ಎನ್ಎಎ (ಪ್ಲ್ಯಾನೋಫಿಕ್ಸ್) ಸಿಂಪಡಣೆ ಮಾಡುವುದು ಹಾಗೂ ಬೆಳೆಗಳ ಸುತ್ತ ಮೇವಿನ ಜೋಳ ಬೆಳೆಯುವ ಮೂಲಕ ಬಿಸಿಗಾಳಿಯ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ
ಅಡಿಕೆ, ಪಾಲಿಹೌಸ್ ಹಾಗೂ ಹೂ ಬೆಳೆಗಳಿಗೆ ಮುನ್ನೆಚ್ಚರಿಕೆ
ಹೊಸದಾಗಿ ನೆಟ್ಟ ಅಡಿಕೆ ಸಸಿಗಳಿಗೆ ನೆರಳು ಪರದೆಗಳನ್ನು ‘ವಿ’ ಆಕಾರದಲ್ಲಿ ಅಳವಡಿಸುವುದು, ಫಸಲು ನೀಡುವ ಮರಗಳಿಗೆ ಸುಣ್ಣದ ಲೇಪನ ಮಾಡುವುದು ಹಾಗೂ ಅಡಿಕೆ ಪಟ್ಟೆಗಳಿಂದ ರಕ್ಷಣೆ ನೀಡಬೇಕು. ಪಾಲಿಹೌಸ್ಗಳಲ್ಲಿ ಶೇ.75ರಷ್ಟು ನೆರಳು ಪರದೆ ಅಳವಡಿಸುವುದು, ಮೇಲ್ಛಾವಣಿಗೆ ಗೋಣಿ ಚೀಲ ಹೊದಿಸಿ ನೀರು ಸಿಂಪಡಿಸುವುದು ಹಾಗೂ ಎಕ್ಸಾಸ್ಟ್ ಫ್ಯಾನ್ಗಳನ್ನು ಬಳಸಿ ಉಷ್ಣಾಂಶ ನಿಯಂತ್ರಿಸುವುದು ಸೂಕ್ತ. ಪಾಲಿಹೌಸ್ ಮೇಲ್ಛಾವಣಿಯಿಂದ ಹರಿದುಬರುವ ನೀರನ್ನು ಕೃಷಿ ಹೊಂಡಗಳಲ್ಲಿ ಸಂಗ್ರಹಿಸಿ ಮರುಬಳಕೆ ಮಾಡಬೇಕು.
ನೀರಿನ ಸಂರಕ್ಷಣೆ ಅತ್ಯಗತ್ಯ
ಮಳೆನೀರನ್ನು ಕೃಷಿ ಹೊಂಡಗಳಲ್ಲಿ ಸಂಗ್ರಹಿಸುವುದು, ಮಾವಿನ ತೋಟಗಳಲ್ಲಿ ನೀರು ಹಿಡಿಯುವ ಕಟ್ಟೆ ನಿರ್ಮಿಸುವುದು, ಕೊಳವೆಬಾವಿಗಳ ಮರುಪೂರಣ ಹಾಗೂ ಮಣ್ಣಿನ ತೇವಾಂಶ ಸಂವೇದಕಗಳು ಮತ್ತು ಸ್ವಯಂಚಾಲಿತ ಹವಾಮಾನ ಕೇಂದ್ರಗಳ ಬಳಕೆ ಮೂಲಕ ನೀರಾವರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು ಎಂದು ಇಲಾಖೆ ಸಲಹೆ ನೀಡಿದೆ.

ಸಾವಯವ ಮಲ್ಚಿಂಗ್ ಮೂಲಕ ಮಣ್ಣಿನ ತೇವಾಂಶ ಉಳಿಸುವುದು, ಕಳೆ ನಿಯಂತ್ರಿಸುವುದು ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು. ತೋಟಗಳ ಮಧ್ಯಭಾಗದಲ್ಲಿ ವರ್ಷಕ್ಕೆ ಎರಡು ಬಾರಿ ಹುರುಳಿ, ಸೆಣಬು, ಡಯಾಂಚಾ, ಅಲಸಂದೆ ಹಾಗೂ ಅವರೆ ಮೊದಲಾದ ಹಸಿರು ಗೊಬ್ಬರ ಮತ್ತು ಹೊದಿಕೆ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ಆರೋಗ್ಯ ಉತ್ತಮವಾಗುವುದರ ಜೊತೆಗೆ ಇಳುವರಿಯೂ ಹೆಚ್ಚಾಗುತ್ತದೆ.
ಬಹುವಾರ್ಷಿಕ ಬೆಳೆಗಳ ಹೊಸ ತೋಟ ಸ್ಥಾಪಿಸುವಾಗ ಬರ ಸಹಿಷ್ಣು ಬೇರುಕಾಂಡಗಳನ್ನು ಬಳಸಬೇಕು. ದೀರ್ಘಾವಧಿಯ ಹಾಗೂ ಹೆಚ್ಚು ನೀರು ಬೇಡುವ ಬೆಳೆಗಳ ಬದಲು ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ತೋಟಗಾರಿಕೆ ಬೆಳೆಗಳನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಗುಣವಂತ ತಿಳಿಸಿದ್ದಾರೆ.

ಸದ್ಯ ಮಳೆ ಕೊರತೆಯಿಂದ ಕೊಳವೆಬಾವಿಗಳಲ್ಲಿ ನೀರು ಇಲ್ಲದಂತಾಗಿದೆ. ನೀರಿನ ಅಭಾವದಿಂದ ಸಾಲ ಮಾಡಿ ಎರಡು ಎಕರೆಯಲ್ಲಿ ಬೆಳೆದಿದ್ದ ನಮ್ಮ ಬಾಳೆ ಬೆಳೆ ಒಣಗುವ ಸ್ಥಿತಿಗೆ ತಲುಪಿದೆ. ಇದರಿಂದ ನಾವು ಭಾರೀ ನಷ್ಟವನ್ನು ಎದುರಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆಗಳ ಸಂರಕ್ಷಣೆಗೆ ರೈತರು ಮುಂಚಿತವಾಗಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಸಂಬಂಧಪಟ್ಟ ಇಲಾಖೆ ಜಾಗೃತಿ ಮೂಡಿಸುವುದರ ಜೊತೆಗೆ ಸೂಕ್ತ ತರಬೇತಿಯನ್ನು ನೀಡಬೇಕು ಎಂದು ಬಾಳೆ ಬೆಳೆಗಾರ ರವಿಕುಮಾರ್ ಹೇಳಿದ್ದಾರೆ.