
ಬದಲಾವಣೆ ಬಯಸುವ, ಪರ್ಯಾಯ ರಾಜಕೀಯ ಶಕ್ತಿಗಾಗಿ ಹಾತೊರೆಯುತ್ತಿರುವ ಕೆಲವು ಯುವಕರು ಆಸಕ್ತಿಯಿಂದ – ಆಶಾಭಾವನೆಯಿಂದ – ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿರುವ ಒಬ್ಬ ವ್ಯಕ್ತಿ ಮತ್ತು ಒಂದು ಪಕ್ಷ.
ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವ ಹಲವರು ಉಪೇಂದ್ರ ಅವರನ್ನು ಬಹಳಷ್ಟು ಇಷ್ಟ ಪಡುತ್ತಿದ್ದಾರೆ ಮತ್ತು ಸ್ವಯಂ ಪ್ರೇರಿತರಾಗಿ ಅದರ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ರಾಜಕೀಯ ಚಿಂತಕರು, ಪ್ರಮುಖ ರಾಜಕೀಯ ಪಕ್ಷಗಳು, ಮುಖ್ಯವಾಹಿನಿಯ ಇತರ ತಜ್ಞರು ಇನ್ನೂ ಉಪೇಂದ್ರ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಸಹ ಅಷ್ಟೇ ವಾಸ್ತವ.
ಇವತ್ತಿನ ಸನ್ನಿವೇಶದಲ್ಲಿ ಉಪೇಂದ್ರ ಅವರ ಪ್ರಾಮುಖ್ಯತೆ, ಅವರ ವಿಚಾರಗಳು, ಅದರ ಗಟ್ಟಿತನ, ವಾಸ್ತವಕ್ಕೆ ಎಷ್ಟು ಹತ್ತಿರವಿದ್ದಾರೆ ಎಂಬ ಬಗ್ಗೆ ಒಂದು ಪಕ್ಷಿ ನೋಟ.
ಎಲ್ಲರಿಗೂ ತಿಳಿದಿರುವಂತೆ ಉಪೇಂದ್ರ ಸಿನಿಮಾ ಸಾಹಿತಿ, ನಿರ್ದೇಶಕ ಮತ್ತು ನಟ. ತನ್ನ ವಿಚಿತ್ರ ವೇಷಭೂಷಣ, ಮ್ಯಾನರಿಸಂ, ಸಂಭಾಷಣೆ, ನಿರೂಪಣೆ ಮತ್ತು ವಿಭಿನ್ನ ವಿಷಯಗಳ ಆಯ್ಕೆಯ ಮೂಲಕ ಸಿನಿಮಾ ರಂಗದಲ್ಲಿ ಜನಪ್ರಿಯತೆ ಗಳಿಸಿದವರು. ಅಲ್ಲಿಯೂ ಸಹ ಸಮಾಜದ ಓರೆಕೋರೆಗಳನ್ನು ವ್ಯಂಗ್ಯವಾಗಿ ಚಿತ್ರಿಸಿ ಚಪ್ಪಾಳೆ ಗಿಟ್ಟಿಸಿಕೊಂಡವರು. ಸಿನಿಮಾ ಒಂದು ಮನರಂಜನಾ ಉದ್ಯಮವಾದ್ದರಿಂದ ಹೇಳುವುದನ್ನು ಹಸಿಹಸಿಯಾಗಿಯೇ ಹೇಳಿ ಜನರನ್ನು ಆಕರ್ಷಿಸಿದರು.
ಆದರೂ ಎಲ್ಲೋ ಒಂದು ಮೂಲೆಯಲ್ಲಿ ಸಮಾಜದ ಬಗೆಗಿನ ಕಾಳಜಿ ಮತ್ತು ರಾಜಕೀಯ ಬದಲಾವಣೆಯ ಬಗ್ಗೆ ಆಗಾಗ ಮಾತನಾಡುತ್ತಲೇ ಇದ್ದರು. ಕೆಲವು ವರ್ಷಗಳ ಹಿಂದೆ ಒಂದು ಮೊದಲೇ ನೊಂದಾಯಿತ ಪಕ್ಷದ ಜೊತೆ ಸೇರಿ ರಾಜಕೀಯ ಪ್ರವೇಶಿಸಿ ನಂತರ ಕೆಲವು ಭಿನ್ನಾಭಿಪ್ರಾಯಗಳ ಕಾರಣದಿಂದ ಅಲ್ಲಿಂದ ಹೊರಬಂದು ” ಪ್ರಜಾಕೀಯ ” ಎಂಬ ಪಕ್ಷ ಸ್ಥಾಪಿಸಿದ್ದಾರೆ. ಕೆಲವು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿ ನಿರೀಕ್ಷೆಗಿಂತ ಕಡಿಮೆ ಮತಗಳನ್ನು ಪಡೆದರು. ಅದು ಸಾಂಕೇತಿಕ ಸ್ಪರ್ಧೆಯಾಗಿ ಸಹ ದಾಖಲಾಗಲಿಲ್ಲ.
ಇದು ಅವರ ರಾಜಕೀಯದ ಹಿನ್ನೆಲೆ. ಹೆಚ್ಚಾಗಿ ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮುಖಾಂತರವೇ ತಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರ ಮೂಲಕ ಪ್ರಚಾರ ಮಾಡುವ ವಿಧಾನ ಅನುಸರಿಸುತ್ತಿದ್ದಾರೆ.
ಉಪೇಂದ್ರ ಅವರ ರಾಜಕೀಯ ಗುರಿ, ಅದಕ್ಕಾಗಿ ಅನುಸರಿಸುತ್ತಿರುವ ಮಾರ್ಗ, ಅವರ ನಿಲುವುಗಳು, ಅವರ ಪ್ರಾಮಾಣಿಕತೆ ಮತ್ತು ದಕ್ಷತೆ, ಸಮರ್ಪಣಾ ಮನೋಭಾವ, ಈ ವ್ಯವಸ್ಥೆಯ ಬಗ್ಗೆ ಅವರಿಗಿರುವ ಜ್ಞಾನ ಎಲ್ಲವೂ ಅವರ ಮಾತುಗಳಿಂದ ಗ್ರಹಿಸಿದಂತೆ…..
ಉಪೇಂದ್ರ ಅವರು ಎಂದಿನಂತೆ ಸಿನಿಮೀಯ ಶೈಲಿಯಲ್ಲಿ ಈ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಆದರ್ಶ ಸಮಾಜದ ಕನಸು ಕಾಣುತ್ತಿದ್ದಾರೆ. ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂತೆ ಅತ್ಯಂತ ಪಾರದರ್ಶಕ ನೀತಿ ನಿಯಮಗಳನ್ನು ಅತ್ಯಂತ ಕಠಿಣವಾಗಿ ಜಾರಿಗೊಳಿಸುವ ಮಾತುಗಳನ್ನು ಆಡುತ್ತಿದ್ದಾರೆ. ಎಲ್ಲಾ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಕೆಲಸದ ದಕ್ಷತೆ ಮತ್ತು ಪ್ರಾಮಾಣಿಕತೆಯ ಉತ್ತರದಾಯಿತ್ವದ ಜವಾಬ್ದಾರಿ ನಿಗದಿಪಡಿಸುವ ಆಸಕ್ತಿ ಹೊಂದಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನು ಅಲ್ಲಿನ ಜನರ ಬೇಡಿಕೆಗೆ ಆ ಕ್ಷಣದಲ್ಲೇ ಪರಿಹಾರ ಸೂಚಿಸುವ ಶಿಸ್ತು ಬದ್ಧ ಆಡಳಿತದ ಬಗ್ಗೆ ಆಸೆಪಟ್ಟಿದ್ದಾರೆ. ಜನ ಪ್ರತಿನಿಧಿಗಳ ಅರ್ಹತೆಯ ಬಗ್ಗೆ ವಿದ್ಯಾರ್ಹತೆಯೂ ಸೇರಿ ಕೆಲವು ಮಾನದಂಡಗಳು ನಿಗದಿಪಡಿಸುವ ವಿಧಾನಗಳನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಚುನಾವಣಾ ಸುಧಾರಣೆಗಳ ಬಗ್ಗೆ ಕ್ರಾಂತಿಕಾರಕ ಬದಲಾವಣೆಗಳನ್ನು ನಿರೀಕ್ಷಿಸುತ್ತಿದ್ದಾರೆ. ರೈತರ ಬೆಳೆಯ ಬೆಲೆಯ ಬಗ್ಗೆ ಒಂದಷ್ಟು ಮಾತನಾಡುತ್ತಾರೆ.
ಒಟ್ಟಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಎಂಬುದು ಒಂದು ಭ್ರಷ್ಟ ವ್ಯವಸ್ಥೆ ಅದಕ್ಕೆ ಬದಲಾಗಿ ಪ್ರಜೆಗಳೇ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳುವ
” ಪ್ರಜಾಕೀಯ ” ವ್ಯವಸ್ಥೆ ಎಂಬ ರಂಗುರಂಗಿನ ವರ್ಣನೆಯನ್ನು ಜನರ ಮುಂದಿಡುತ್ತಿದ್ದಾರೆ. ಅಲ್ಲದೆ ಆಗಾಗ ತಮ್ಮ ವೃತ್ತಿ ಬದುಕಿನ ಬಿಡುವಿನ ಸಮಯದಲ್ಲಿ ಮಾಧ್ಯಮಗಳಲ್ಲಿ ಕುಳಿತು ವ್ಯವಸ್ಥೆಯ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಒಬ್ಬ ಜನಪ್ರಿಯ ಸಿನಿಮಾ ನಟ ನಿರ್ದೇಶಕನ ರಾಜಕೀಯ ಕನಸುಗಳು ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ. ಏಕೆಂದರೆ ಸಿನಿಮಾ ಒಂದು ಕಾಲ್ಪನಿಕ ಜಗತ್ತಿನ ಕ್ರಿಯಾತ್ಮಕ ಕಲಾ ಲೋಕ, ಜೊತೆಗೆ ಮುಕ್ತ ಮಾರುಕಟ್ಟೆಯಲ್ಲಿ ಜನರನ್ನು ಮನರಂಜಿಸುತ್ತಾ, ಹಣವನ್ನೂ ಗಳಿಸುತ್ತಾ, ಅಪಾರ ಸ್ಪರ್ಧೆಯನ್ನು, ವಿರೋಧಗಳನ್ನು ಎದುರಿಸುತ್ತಾ, ಅಭಿಮಾನಿಗಳನ್ನು ಮೆಚ್ಚಿಸುತ್ತಾ, ಮುಖದ ಬಣ್ಣದ ಜೊತೆಗೆ ಮನಸ್ಸಿನ ಬಣ್ಣವನ್ನು ಕಾಪಾಡಿಕೊಳ್ಳುತ್ತಾ ಜೀವಿಸಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಮರೆಯಾಗಿ ಹೋಗಿ ಬಿಡುವ ಸಾಧ್ಯತೆ ಇದೆ.
ಉಪೇಂದ್ರ ಅವರದು ಎಷ್ಟರಮಟ್ಟಿಗೆ ಪ್ರಾಯೋಗಿಕ ಚಿಂತನೆಗಳು ಎಂಬುದೇ ನಮ್ಮನ್ನು ಕಾಡುವ ಪ್ರಶ್ನೆಗಳು….
ಉಪೇಂದ್ರ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದವರು. ಒಂದಷ್ಟು ಶ್ರಮ, ಪ್ರತಿಭೆ, ಜನರ ಮನೋಭಾವವನ್ನು ಗ್ರಹಿಸಿದ ಕಾರಣದಿಂದ ಚಿಕ್ಕ ವಯಸ್ಸಿನಲ್ಲೇ ಚಿತ್ರ ರಂಗದಲ್ಲಿ ಬಹುಬೇಗ ಎತ್ತರದ ಸ್ಥಾನಕ್ಕೆ ಏರಿದವರು. ಆ ಜನಪ್ರಿಯತೆಯನ್ನು ಅತ್ಯಂತ ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಂಡು, ವೈಯಕ್ತಿಕ ಜೀವನದ ಆರ್ಥಿಕ ವಿಷಯದಲ್ಲಿ ಮತ್ತು ಕೌಟುಂಬಿಕ ವಿಷಯದಲ್ಲಿ ಮತ್ತು ಒಟ್ಟು ಬದುಕಿನಲ್ಲಿ ತೃಪ್ತಿದಾಯಕ ಲಕ್ಸುರಿ ಜೋನ್ ನಲ್ಲಿ ( ಶ್ರೀಮಂತಿಕೆಯಲ್ಲಿ ) ಇರುವವರು ಎಂದು ಕಂಡುಬರುತ್ತದೆ.
ಭಾರತೀಯ ಸಮಾಜ ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ. ಅದು ಆರಾಧಿಸುವ ಮೆಚ್ಚುವ ಗೌರವಿಸುವ ಆದರ್ಶಗಳಿಗಿಂತ ವಾಸ್ತವದಲ್ಲಿ ತೀರಾ ಭಿನ್ನವಾಗಿದೆ. ಜನರ ಮಾತು ಮತ್ತು ಕೃತಿಗಳಲ್ಲಿ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ.
ಕೆಲವೇ ಉದಾಹರಣೆಗಳೆಂದರೆ,
ಮಹಿಳೆಯರನ್ನು ಭಾರತದ ಸಂಸ್ಕೃತಿಯಲ್ಲಿ ದೇವತೆ ಎನ್ನುವಷ್ಟು ಪೂಜನೀಯ ಭಾವನೆಯಲ್ಲಿ ನೋಡಲಾಗುತ್ತದೆ. ಆದರೆ ವಾಸ್ತವದಲ್ಲಿ ದಿನದ 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಒಂಟಿಯಾಗಿ ಓಡಾಡುವುದು ಅಪಾಯಕಾರಿ ಅಥವಾ ಸುರಕ್ಷಿತವಲ್ಲ ಎಂಬುದು ಹೆಣ್ಣು ಹೆತ್ತವರಿಗೆ ಚೆನ್ನಾಗಿ ತಿಳಿದಿದೆ. ಅಸಹಾಯಕ ಹೆಣ್ಣು ಮಕ್ಕಳ ಬಗ್ಗೆ ಖಾಸಗಿಯಾಗಿ ಹೇಗೆ ಮಾತನಾಡಿಕೊಳ್ಳುತ್ತಾರೆ ಮತ್ತು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯ.
ಇನ್ನೊಬ್ಬರ ಆಸ್ತಿ ಹಣ ಅಸಹ್ಯಕ್ಕೆ ಸಮಾನ ಎಂದು ವೇದಗಳು ಉಪನಿಷತ್ತುಗಳು ಹೇಳುತ್ತವೆ, ಸಂವಿಧಾನ ಅದು ಅಪರಾಧ ಎಂದು ಹೇಳುತ್ತದೆ. ಆದರೆ ಭ್ರಷ್ಟಾಚಾರದ ವಿಷಯದಲ್ಲಿ ಭಾರತ ತುಂಬಾ ಮುಂದಿದೆ. ಡೆತ್ ಸರ್ಟಿಫಿಕೇಟ್ ಪಡೆಯಲು ಸಹ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ.
” ವಸು ದೈವ ಕುಟುಂಬಕಂ ”
” ಹಿಂದು ನಾವೆಲ್ಲರೂ ಒಂದು ” ಎಂದು ಹೇಳುತ್ತಲೇ ನೂರಾರು ಮೇಲು ಕೀಳುಗಳ ಜಾತಿ ವ್ಯವಸ್ಥೆಯಲ್ಲಿ ನಾವು ಬಂಧಿಯಾಗಿದ್ದೇವೆ.
ಹೇಳಲು ಇನ್ನೂ ಸಾಕಷ್ಟು ಇದೆ.
ಇದನ್ನು ಉಪೇಂದ್ರ ಅವರು ಸಂಪೂರ್ಣವಾಗಿ ಗ್ರಹಿಸಿಲ್ಲ.
ನಮ್ಮ ಕನಸಿನ ಯೋಜನೆಗಳನ್ನು ರೂಪಿಸುವುದು ಸುಲಭ. ಅದರ ಅನುಷ್ಠಾನವೇ ಬಹುಮುಖ್ಯ.
ಸಿನಿಮಾ ನಟರು ತಮ್ಮ ಜನಪ್ರಿಯತೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹೊಸದೇನು ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಇದೆ. ಈಗಾಗಲೇ ಸಾಕಷ್ಟು ಪ್ರಯೋಗಗಳು ನಡೆದಿವೆ. ಹೊಸ ಪ್ರವೇಶಗಳು ಆಗುತ್ತಿದೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ ರಾಜ್ಯಾದ್ಯಂತ ರಾಜಕೀಯ ಪ್ರಭಾವ ಬೀರಿರುವ ಸಿನಿಮಾ ನಟರು ಯಾರು ಇಲ್ಲ. ಸ್ಥಳೀಯ ಮತ್ತು ವೈಯಕ್ತಿಕ ಮಟ್ಟದಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ.
ಉಪೇಂದ್ರ ಅವರು ಯಾವುದೇ ಒಂದು ನಿರ್ದಿಷ್ಟ ಸಿದ್ದಾಂತಗಳ ಸುತ್ತ ಅಥವಾ ಒಟ್ಟು ವ್ಯವಸ್ಥೆಯ ಸಮಗ್ರ ಚಿತ್ರಣವನ್ನು ಗ್ರಹಿಸಿ ಮಾತನಾಡುತ್ತಿಲ್ಲ. ಒಂದು ಬಲವಾದ ಸಂಘಟನಾತ್ಮಕ ಅಡಿಪಾಯ ಹಾಕಲು ಪ್ರಯತ್ನಿಸುತ್ತಿಲ್ಲ. ಒಂದು ಸಾಮಾಜಿಕ ಮತ್ತು ರಾಜಕೀಯ ಚಳವಳಿ ರೂಪಿಸುವ ಉದ್ದೇಶವನ್ನು ಹೊಂದಿದಂತೆ ಕಾಣುವುದಿಲ್ಲ.
ಈ ಕ್ಷಣದ ಜನರ ಅಸಹನೀಯತೆಯ ಕಾರಣಗಳಿಗೆ ಧ್ವನಿಯಾಗುವ ಪ್ರಯತ್ನ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ಬೇರು ಮಟ್ಟದಲ್ಲಿ ಯೋಚಿಸದೆ ಫಾಸ್ಟ್ ಫುಡ್ ಸಂಸ್ಕೃತಿಯ ರೀತಿಯ ಮಾತುಗಳೇ ಜನಪ್ರಿಯತೆ ಗಳಿಸಬಹುದು ಎಂದು ನಿರೀಕ್ಷಿಸುತ್ತಿದ್ದಾರೆ. ಕರ್ನಾಟಕದ ಜನತೆಗೆ ಒಂದು ಪರ್ಯಾಯ ರಾಜಕೀಯ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿಲ್ಲ ಎಂಬುದು ಕಂಡುಬರುತ್ತದೆ.
ತಾವು ಹರಿಯ ಬಿಡುವ ಚಿಂತನೆಗಳಿಗೆ ಜನರೇ ಪ್ರಭಾವಿತರಾಗಿ ಮುಂದೆ ಬಂದು ರಾಜಕೀಯ ಬದಲಾವಣೆಗೆ ಕಾರಣವಾಗಲಿ. ಅದು ಜನರ ಲಾಭಕ್ಕಾಗಿ ಇರುವುದರಿಂದ ಅವರೇ ಹೆಚ್ಚು ಆಸಕ್ತಿ ವಹಿಸಲಿ. ನಾನು ಅದಕ್ಕೆ ನಾಯಕತ್ವ ವಹಿಸುತ್ತೇನೆ ಎಂಬ ಮನೋಭಾವ ಅವರ ಮಾತುಗಳಲ್ಲಿ ಕಂಡುಬರುತ್ತದೆ. ಬೀದಿಗಿಳಿದಿ ಹೋರಾಡುವ, ಕೆಲವು ವಿಷಯಗಳಲ್ಲಿ ನೇರ ನಿಷ್ಠುರವಾಗಿ ಮಾತನಾಡುವ, ಹಿರಿಯ ರಾಜಕೀಯ ತಜ್ಞರೊಂದಿಗೆ ಚರ್ಚಿಸುವ, ಮುಂದಿನ ಬದುಕಿನ ಸಂಪೂರ್ಣ ಸಮಯವನ್ನು ರಾಜಕೀಯವಾಗಿ ಕಳೆಯುವ ಸಮಯ ಪ್ರಜ್ಞೆ ಅವರಲ್ಲಿ ಇಲ್ಲಿಯವರೆಗೂ ಕಂಡು ಬಂದಿಲ್ಲ.
ಭ್ರಷ್ಟಾಚಾರದ ಬಗ್ಗೆ ಉಪೇಂದ್ರ ಸಾಕಷ್ಟು ಮಾತನಾಡುತ್ತಾರೆ. ಆದರೆ ಹಣದ ಅನಿವಾರ್ಯತೆ ಮತ್ತು ಅದಕ್ಕೆ ನಮ್ಮ ಜನಗಳಲ್ಲಿ ಇರುವ ಮಹತ್ವವನ್ನು ಮರೆಯುತ್ತಾರೆ. ಮನಸ್ಸುಗಳೇ ಭ್ರಷ್ಟಗೊಂಡಿರುವಾಗ ವಸ್ತುಗಳ ಭ್ರಷ್ಟಾಚಾರ ಒಂದು ಸಮಸ್ಯೆಯೇ ಅಲ್ಲ. ಜನರ ಮನಸ್ಸುಗಳನ್ನು ವಿಶಾಲ ಗೊಳಿಸುವ ಕೆಲಸ ಮೊದಲು ಮಾಡಬೇಕಿದೆ. ಜನರಲ್ಲಿ ಒಳ್ಳೆಯತನ ಅಥವಾ ಮಾನವೀಯ ಮೌಲ್ಯಗಳನ್ನು ಬೆಳೆಸಿದರೆ ಸಹಜವಾಗಿ ಅನೇಕ ಸಮಸ್ಯೆಗಳು ತನ್ನಿಂದ ತಾನೇ ಕಡಿಮೆಯಾಗುತ್ತದೆ. ಆ ಸೂಕ್ಷ್ಮಗಳನ್ನು ಅವರು ಗಮನಿಸಬೇಕಿದೆ.
ಈಗಾಗಲೇ ಕಾರ್ಯಾಂಗ ವಿದ್ಯಾರ್ಹತೆ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ಸಾಕಷ್ಟು ಭ್ರಷ್ಟಗೊಂಡಿದೆ. ಶಾಸಕಾಂಗವನ್ನು ಸಹ ವಿದ್ಯಾರ್ಹತೆಯ ಮೇಲೆ ಆಯ್ಕೆ ಮಾಡುವ ಅವರ ಚಿಂತನಾ ಕ್ರಮ ಬಾಲಿಶವೆನಿಸುತ್ತದೆ. ಅದೇ ಅಂಕಗಳ ಬುದ್ದಿವಂತರೇ ಮತ್ತೆ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ. ಹೃದಯವಂತರು ಅಧಿಕಾರಕ್ಕೆ ಬರುವುದು ಕಷ್ಟವಾಗುತ್ತದೆ. ಪ್ರಜಾಪ್ರಭುತ್ವ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಜನ ಪ್ರತಿನಿಧಿಗಳು ಅಂಕಗಳ ಬುದ್ದಿವಂತಿಕೆಗಿಂತ ಸೇವಾ ಮನೋಭಾವವೇ ಮುಖ್ಯವಾಗಬೇಕು.
ಉಪೇಂದ್ರ ಮತ್ತು ಅವರ ಪ್ರಜಾಕೀಯ ಅಥವಾ ಈ ರೀತಿಯ ಹೊಸ ಪ್ರಯೋಗಗಳು ಇಂದಿನ ಅವಶ್ಯಕತೆಗಳು ಎಂಬುದನ್ನು ಸಹ ಮರೆಯಬಾರದು. ಜನರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಗಿ ಇಡಬೇಕೆಂದರೆ ಇವುಗಳನ್ನು ಸ್ವಾಗತಿಸಲೇ ಬೇಕು. ಆದರೆ ಇಲ್ಲಿ ಒಂದು ಅಪಾಯವೂ ಇದೆ. ಇಡೀ ರಾಜ್ಯಾದ್ಯಂತ ಮತ್ತು ಎಲ್ಲಾ ಭಾಗಗಳಲ್ಲೂ ಪ್ರಭಾವ ಬೀರಿ ಜನ ಸಮೂಹವನ್ನು ಆಕರ್ಷಿಸದೆ ಕೇವಲ ಕೆಲವೇ ಪ್ರದೇಶದಲ್ಲಿ ಜನಪ್ರಿಯವಾದರೆ ಈಗಾಗಲೇ ಅನೇಕ ಪಕ್ಷಗಳಲ್ಲಿ ಹರಿದು ಹಂಚಿಹೋಗಿರುವ ಮತದಾರ ಮತ್ತೊಂದು ಪಕ್ಷವನ್ನು ಸಹ ಕೇವಲ ಸಂಖ್ಯೆಗಳ ಆಧಾರದ ಮೇಲೆ ಗುರುತಿಸುವಂತಾದರೆ ಯಾವುದೇ ಪ್ರಯೋಜನ ಇಲ್ಲ. ಆ ಪಕ್ಷ 80, ಈ ಪಕ್ಷ 60, ಮತ್ತೊಂದು ಪಕ್ಷ 40, ಹೊಸ ಪಕ್ಷ 20, ಮತ್ತೆರಡು ಪಕ್ಷ 14 – 10 ಎಂದು 224 ಕ್ಷೇತ್ರಗಳನ್ನು ಹಂಚಿಕೊಂಡರೆ ಯಾವುದೇ ಸುಧಾರಣೆ ಸಾಧ್ಯವಿಲ್ಲ.
ಧರ್ಮಗಳು, ಜಾತಿಗಳು, ಭಾಷೆಗಳು
ಒಂದು ಕಡೆ ವಿಭಜಿಸಿದರೆ, ಅಜ್ಞಾನ, ಬಡತನ, ಅನಿವಾರ್ಯತೆಗಳು ಮತ್ತೊಂದು ಕಡೆ ಕಾಲೆಳೆಯುತ್ತಿದ್ದರೆ, ಉಡಾಫೆ ಮನೋಭಾವ, ಪುಡಾರಿತನ, ಜೈಕಾರ ಸಂಸ್ಕೃತಿಗಳು ನಮ್ಮ ನಡವಳಿಕೆಗಳೇ ಆಗಿರುವಾಗ ಬದಲಾವಣೆ ಅಷ್ಟು ಸುಲಭವಲ್ಲ. ಈಗಾಗಲೇ ಮೂರು ರಾಜಕೀಯ ಪಕ್ಷಗಳು ಎಲ್ಲಾ ಹಂತದಲ್ಲೂ ಬೇರು ಬಿಟ್ಟಿವೆ. ಜಾತಿ ರಾಜಕಾರಣದ ಕಾರ್ಯಕರ್ತರುಗಳ ಪಡೆ ಹೊಂದಿವೆ.
ಅವರುಗಳನ್ನು ಪರ್ಯಾಯ ರಾಜಕೀಯಕ್ಕೆ ಮಾನಸಿಕವಾಗಿ ಸಿದ್ದ ಮಾಡುವುದು ಕಷ್ಟದ ಕೆಲಸ. ಅನೇಕ ಸಂಘಟನೆಗಳು ಛಿದ್ರ ಛಿದ್ರ ಸ್ಥಿತಿಯಲ್ಲಿ ಇರುವಾಗ ಅವರುಗಳನ್ನು ಒಂದು ವಿಷಯದ ಆಧಾರದ ಮೇಲೆ ಒಗ್ಗೂಡಿಸಲು ಹರ ಸಾಹಸ ಮಾಡಬೇಕಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಜನ ಸಮೂಹ ರಾಜಕೀಯವಾಗಿ ಒಬ್ಬ ಪ್ರಾಮಾಣಿಕ ಮತ್ತು ಆಕರ್ಷಕ ನಾಯಕನನ್ನು ಹುಡುಕುತ್ತಿರುತ್ತದೆ. ಏನೇ ಸಾಮೂಹಿಕ ಮತ್ತು ಪ್ರಜಾಸತ್ತಾತ್ಮಕ ಎಂದು ಹೇಳಿಕೊಂಡರು ಒಬ್ಬ ನಾಯಕನೇ ಜನರನ್ನು ಹೆಚ್ಚು ಆಕರ್ಷಿಸುವುದು. ಆತನೇ ಬದಲಾವಣೆಯ ಹರಿಕಾರ ಆಗಲು ಸಾಧ್ಯ. ಆ ನಾಯಕ ಅತ್ಯಂತ ಗಟ್ಟಿ ವ್ಯಕ್ತಿತ್ವ ಹೊಂದಿರಬೇಕು. ರಾಜಕೀಯ ಪರಿಸ್ಥಿತಿ ಸಹ ಅನುಕೂಲಕರವಾಗಿರಬೇಕು. ಅದು ಅಪರೂಪಕ್ಕೊಮ್ಮೆ ಸಂಭವಿಸುವ ಘಟನೆಗಳು ಮಾತ್ರ. ಆದರೆ ಜನ ಮಾನಸದಲ್ಲಿ ನಿರೀಕ್ಷೆಗಳು ಮಾತ್ರ ಬೆಟ್ಟದಷ್ಟು ಮತ್ತು ನಿರಂತರ……
ಈ ಹಿನ್ನೆಲೆಯಲ್ಲಿ ಉಪೇಂದ್ರ ಮತ್ತು ಅವರ ಪ್ರಜಾಕೀಯ ಯಾವ ರೀತಿಯ ಹೋರಾಟ ರೂಪಿಸುತ್ತದೆ, ಜನರನ್ನು ಆಕರ್ಷಿಸುತ್ತದೆ, ಅವರು ಎಷ್ಟರಮಟ್ಟಿಗೆ ಇದರಲ್ಲಿ ತೊಡಗಿಸಿಕೊಳ್ಳುತ್ತಾರೆ, ವಿವಾದಾತ್ಮಕ ವಿಷಯಗಳಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ, ಅಡ್ಡಿ ಆತಂಕಗಳನ್ನು ಯಾವ ರೀತಿ ಎದುರಿಸುತ್ತಾರೆ, ತಮ್ಮದೇ ಕಾರ್ಯಕರ್ತರ ಬಂಡಾಯ ಸಂದರ್ಭಗಳನ್ನು ಹೇಗೆ ನಿರ್ವಹಿಸುತ್ತಾರೆ, ಭ್ರಷ್ಟರು ಜನಪ್ರಿಯತೆಯ ಹೆಸರಲ್ಲಿ ಆ ಪಕ್ಷ ಸೇರುವುದನ್ನು ಹೇಗೆ ತಡೆಗಟ್ಟುತ್ತಾರೆ, ಜಾತಿ ವ್ಯವಸ್ಥೆಯನ್ನು ಹೇಗೆ ಮೀರುತ್ತಾರೆ ಎಲ್ಲವೂ ಕಾಲವೇ ನಿರ್ಧರಿಸುತ್ತದೆ.
ಏನೇ ಆಗಲಿ, ಯಾರೇ ಬರಲಿ, ಜನರಲ್ಲಿ ಯೋಚನಾ ಶಕ್ತಿಯನ್ನು ವಿಶಾಲಗೊಳಿಸದೆ, ಅವರ ಪ್ರಬುದ್ದತೆಯ ಮಟ್ಟವನ್ನು ಹೆಚ್ಚಿಸದೆ ಯಾವುದೇ ಬದಲಾವಣೆ ಸಾಧ್ಯವಿಲ್ಲ. ತಾತ್ಕಾಲಿಕ ಯಶಸ್ಸು ಸಹ ಕಷ್ಟ.
ಜನರ ಮನಸ್ಸುಗಳನ್ನು ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳಿಗೆ ಸ್ಪಂದಿಸುವ ರೀತಿಯಲ್ಲಿ ಮತ್ತೆ ಪುನರುಜ್ಜೀವನ ಗೊಳಿಸಿದರೆ ಮಾತ್ರ ಏನಾದರೂ ನಿರೀಕ್ಷಿಸಬಹುದು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ