ಕೌಟುಂಬಿಕ ಕಲಹ ಡಬಲ್ ಮರ್ಡರ್: ಅಕ್ಕ-ತಂಗಿಯ ಹತ್ಯೆ, ಆರೋಪಿ ಪೊಲೀಸರಿಗೆ ಶರಣು

ಚಿಂತಾಮಣಿ: ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹ ಕೊನೆಗೆ ಭೀಕರ ತಿರುವು ಪಡೆದು, ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಆಕೆಯ ತಂಗಿಯನ್ನ ಚಾಕುವಿನಿಂದ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಜಿ.ಜಿ. ಪೇಟೆಯಲ್ಲಿ ನಡೆದಿದೆ.

ಹತ್ಯೆಗೀಡಾದವರನ್ನು ರೇಷ್ಮಾ (21) ಮತ್ತು ಶಮಾ (25) ಎಂದು ಗುರುತಿಸಲಾಗಿದೆ. ಶಮಾ ತನ್ನ ಪತಿ ಏಜಾಜ್‌ನೊಂದಿಗೆ ಉಂಟಾಗಿದ್ದ ವೈಮನಸ್ಸಿನ ಹಿನ್ನೆಲೆಯಲ್ಲಿ ಮನೆ ಬಿಟ್ಟು ತಂಗಿ ರೇಷ್ಮಾ ಅವರೊಂದಿಗೆ ಚಿಂತಾಮಣಿಯ ಜಿ.ಜಿ. ಪೇಟೆಯಲ್ಲಿ ವಾಸವಾಗಿದ್ದರು.

ಕಳೆದ ಮೂರು ತಿಂಗಳಿಂದ ದಂಪತಿಯನ್ನು ರಾಜಿ ಮಾಡಿಸಲು ಪಂಚಾಯಿತಿಗಳು ನಡೆದಿದ್ದರೂ, ಪತ್ನಿ ಪತಿಯೊಂದಿಗೆ ಮರಳಲು ನಿರಾಕರಿಸಿದ್ದರಿಂದ ಆರೋಪಿ ಏಜಾಜ್ ಆಕ್ರೋಶಗೊಂಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆತ ಮನೆಗೆ ಬಂದು ಪತ್ನಿ ಶಮಾ ಹಾಗೂ ಆಕೆಯ ತಂಗಿ ರೇಷ್ಮಾಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಘಟನೆಯ ಬಳಿಕ ಏಜಾಜ್ ಮೂವರು ಮಕ್ಕಳನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದು, ನಂತರ ಕೋಲಾರದ ಗಲ್‌ಪೇಟೆ ಪೊಲೀಸ್ ಠಾಣೆಗೆ ಹತ್ಯೆಗೆ ಬಳಸಿದ ಚಾಕುವಿನೊಂದಿಗೆ ಶರಣಾಗಿದ್ದಾನೆ. ಆರೋಪಿ ಕೋಲಾರ ನಗರದ ಗಲ್‌ಪೇಟೆ ನಿವಾಸಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!