ಮಕ್ಕಳ ನಡುವೆ ಕಾಣಿಸಿಕೊಂಡ 5 ಅಡಿ ನಾಗರಹಾವು: ಉರಗ ರಕ್ಷಕರಿಂದ ಸುರಕ್ಷಿತ ರಕ್ಷಣೆ: ಮಕ್ಕಳು ಸುರಕ್ಷಿತ

ಬೆಂಗಳೂರು: ಹೆಸರಘಟ್ಟ ಹೋಬಳಿಯ ತೋಟಗೆರೆ ಗ್ರಾಮದಲ್ಲಿ ಗುರುವಾರ ರಾತ್ರಿ ಸುಮಾರು 10.50ರ ವೇಳೆಗೆ ಮನೆಯೊಳಗೆ ನುಗ್ಗಿದ್ದ ಸುಮಾರು 5 ಅಡಿ ಉದ್ದದ ನಾಗರಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ.

ಮನೆಯೊಳಗೆ ಮಕ್ಕಳು ಮಲಗಿದ್ದ ವೇಳೆ ಅವರ ಸಮೀಪವೇ ನಾಗರಹಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬದವರು ತಕ್ಷಣ ಸಂರಕ್ಷಣಾ ಕರೆ ನೀಡಿದ್ದಾರೆ.

 ಮಾಹಿತಿ ಪಡೆದ ಕಾನು ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನದ ಉರಗ ರಕ್ಷಕ ಪ್ರಶಾಂತ್ ಸ್ಥಳಕ್ಕೆ ಧಾವಿಸಿ,  ಮೊದಲು ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಬಳಿಕ ನಾಗರಹಾವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಸೆರೆಹಿಡಿದು, ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡುಗಡೆ ಮಾಡಿದರು.

ಸಮಯೋಚಿತವಾಗಿ ಕಾರ್ಯನಿರ್ವಹಿಸಿದ ಉರಗ ರಕ್ಷಕರಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.

ಮಳೆಗಾಲದ ಸಂದರ್ಭದಲ್ಲಿ ಹಾವುಗಳು ಆಹಾರ ಮತ್ತು ಆಶ್ರಯ ಅರಸಿ ಮನೆಗಳ ಸುತ್ತಮುತ್ತ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಹಾವು ಕಂಡುಬಂದರೆ ಅದನ್ನು ಹಿಡಿಯಲು ಅಥವಾ ಕೊಲ್ಲಲು ಯತ್ನಿಸದೆ, ತಕ್ಷಣ ಅರಣ್ಯ ಇಲಾಖೆ ಅಥವಾ ತರಬೇತಿ ಪಡೆದ ಉರಗ ರಕ್ಷಕರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!