ಕೆಂಪೇಗೌಡರ ಪುತ್ಥಳಿ ಭೂಮಿಪೂಜೆ ಗೊಂದಲ ವಿಚಾರ: ಕಾನೂನುಬದ್ಧವಾಗಿಯೇ ಕಾರ್ಯ ನಡೆದಿದ್ದು, ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣ – ಬಾಶೆಟ್ಟಿಹಳ್ಳಿ ಪಪಂ ಅಧ್ಯಕ್ಷ ಪ್ರೇಮ್ ಕುಮಾರ್ ಸ್ಪಷ್ಟನೆ

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬ್ಯಾಂಕ್ ಸರ್ಕಲ್‌ನಲ್ಲಿ ಕೆಂಪೇಗೌಡರ ಕಂಚಿನ ಪುತ್ಥಳಿ ಸ್ಥಾಪನೆಗೆ ನಡೆದ ಭೂಮಿಪೂಜೆ ಕುರಿತು ಉಂಟಾಗಿದ್ದ ಗೊಂದಲಕ್ಕೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ಪ್ರೇಮ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೂನ್ 27ರಂದು ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ನಡೆದ ಭೂಮಿಪೂಜೆ ಸಂಪೂರ್ಣ ಕಾನೂನುಬದ್ಧವಾಗಿಯೇ ನಡೆದಿದೆ ಎಂದು ತಿಳಿಸಿದರು.

ಫೆಬ್ರವರಿ 5ರಂದು ನಡೆದ ಪಟ್ಟಣ ಪಂಚಾಯತಿಯ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಬ್ಯಾಂಕ್ ಸರ್ಕಲ್‌ನಲ್ಲಿ ಕೆಂಪೇಗೌಡರ ಕಂಚಿನ ಪುತ್ಥಳಿ ಸ್ಥಾಪಿಸುವ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಯೋಜನೆಯನ್ನು ಪಟ್ಟಣ ಪಂಚಾಯತಿ ಬಜೆಟ್‌ನಲ್ಲಿಯೂ ಸೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ತಾಂತ್ರಿಕ ಅನುಮೋದನೆ ಹಾಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಮೂರು ತಿಂಗಳೊಳಗೆ ಕಾಮಗಾರಿ ಮುಗಿಸಲಾಗುವುದು ಎಂದು ಹೇಳಿದರು.

ಶಾಸಕ ಧೀರಜ್ ಮುನಿರಾಜು ದೊಡ್ಡಬಳ್ಳಾಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಶ್ರಮಿಸುತ್ತಿದ್ದು, ಅವರ ವಿರುದ್ಧ ಅನಗತ್ಯ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದು ಪ್ರೇಮ್ ಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದ ಹೆಮ್ಮೆಯ ಸಂಸ್ಥೆಯಾಗಿದೆ. ಫೆಬ್ರವರಿಯಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲೇ ಕೆಂಪೇಗೌಡರ ಪುತ್ಥಳಿ ನಿರ್ಮಾಣಕ್ಕೆ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದ್ದು, ಕಾಮಗಾರಿಗೆ ಅಗತ್ಯ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದರು.

ಜೂನ್ 27ರಂದು ಗುದ್ದಲಿ ಪೂಜೆ ನಡೆಸಲಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಈ ವೇಳೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಶ್ವೇತಾ ಮುರಳೀಧರ್, ಸದಸ್ಯರಾದ ಕೃಷ್ಣಪ್ಪ, ಮುನಿಶಂಕರ್, ರಾಧಾಮಣಿ, ಅಂಬುಜಾಕ್ಷಿ, ನೇತ್ರ ಮಧುಕುಮಾರ್, ರಾಮಮೂರ್ತಿ ಹಾಗೂ ಮುಖಂಡ ಬಿ. ಆನಂದ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!