
ವಿಜಯಪುರ: ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕೋಟಿ ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಿಜಯಪುರ ಪೊಲೀಸರು ವಶಪಡಿಸಿಕೊಂಡಿದ್ದು, ಈ ವೇಳೆ ಬಳಸಲಾಗಿದ್ದ ಹೈಟೆಕ್ ಕಳ್ಳಸಾಗಣೆ ತಂತ್ರ ಬೆಳಕಿಗೆ ಬಂದಿದೆ.
ಖಚಿತ ಮಾಹಿತಿಯ ಮೇರೆಗೆ ವಿಜಯಪುರ ಜಿಲ್ಲೆಯ ಕೋಲ್ಹಾರ ಟೋಲ್ ಸಮೀಪ ದಾಳಿ ನಡೆಸಿದ ಪೊಲೀಸರು, ಎರೆಹುಳು ಗೊಬ್ಬರ ಸಾಗಿಸುತ್ತಿದ್ದ ಲಾರಿಯನ್ನು ತಪಾಸಣೆಗೆ ಒಳಪಡಿಸಿದರು. ಆರಂಭದಲ್ಲಿ ಲಾರಿಯಲ್ಲಿ ಗೊಬ್ಬರ ಮಾತ್ರ ಇದೆ ಎಂದು ಚಾಲಕರು ಹೇಳಿದರೂ, ಅನುಮಾನಗೊಂಡ ಪೊಲೀಸರು ಗೊಬ್ಬರದ ಚೀಲಗಳನ್ನು ತೆರವುಗೊಳಿಸಿ ಪರಿಶೀಲಿಸಿದಾಗ ಅವುಗಳ ಕೆಳಭಾಗದಲ್ಲಿ ಗೋವಾ ಮದ್ಯದ ಬಾಕ್ಸ್ಗಳನ್ನು ಅತ್ಯಂತ ಚಾಕಚಕ್ಯತೆಯಿಂದ ಅಡಗಿಸಿಡಲಾಗಿರುವುದು ಪತ್ತೆಯಾಯಿತು.
ಹೈಟೆಕ್ ತಂತ್ರದಿಂದ ಸಾಗಾಟ
ತನಿಖೆ ವೇಳೆ ಅಕ್ರಮ ಮದ್ಯ ಸಾಗಾಟಕ್ಕಾಗಿ ಆರೋಪಿಗಳು ವಿಶೇಷ ತಂತ್ರ ರೂಪಿಸಿರುವುದು ಬೆಳಕಿಗೆ ಬಂದಿದೆ. ಪೊಲೀಸರ ಕಣ್ತಪ್ಪಿಸಲು ಪ್ರತಿ ಚಾಲಕನಿಗೆ ಕೇವಲ ಒಂದು ನಿರ್ದಿಷ್ಟ ಜಿಪಿಎಸ್ ಲೊಕೇಶನ್ ಮಾತ್ರ ನೀಡಲಾಗುತ್ತಿತ್ತು. ಆ ಸ್ಥಳ ತಲುಪಿದ ಬಳಿಕ ಮತ್ತೊಬ್ಬ ಚಾಲಕ ವಾಹನದ ನಿಯಂತ್ರಣ ವಹಿಸಿಕೊಳ್ಳುತ್ತಿದ್ದ. ಹೀಗೆ ಹಂತ ಹಂತವಾಗಿ ಚಾಲಕರನ್ನು ಬದಲಾಯಿಸುತ್ತಾ ಲಾರಿಯನ್ನು ಗೋವಾದಿಂದ ಮಹಾರಾಷ್ಟ್ರದತ್ತ ಸಾಗಿಸಲಾಗುತ್ತಿತ್ತು.
ಈ ವಿಧಾನದಿಂದ ಲಾರಿ ಬೆಳಗಾವಿ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳನ್ನು ದಾಟಿ ವಿಜಯಪುರ ತಲುಪಿತ್ತು. ಆದರೆ ವಿಜಯಪುರ ಪೊಲೀಸರ ಕಾರ್ಯಾಚರಣೆಯಿಂದ ಅಕ್ರಮ ದಂಧೆ ಬಯಲಾಗಿದೆ.

₹1.65 ಕೋಟಿ ಮೌಲ್ಯದ ಮದ್ಯ ಜಪ್ತಿ
ಪೊಲೀಸರು ಲಾರಿಯಿಂದ 12,952 ಲೀಟರ್ಗೂ ಅಧಿಕ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿಯಾದ ಮದ್ಯದಲ್ಲಿ 290 ಬಾಕ್ಸ್ ಮ್ಯಾನ್ಷನ್ ಹೌಸ್ ಬ್ರಾಂಡಿ, 397 ಬಾಕ್ಸ್ ರಾಯಲ್ ಬ್ಲೂ ಹಾಗೂ 800 ಬಾಕ್ಸ್ ರಾಯಲ್ ಸೆಲೆಕ್ಟ್ ಮದ್ಯ ಸೇರಿವೆ. ಮದ್ಯ ಹಾಗೂ ಲಾರಿ ಸೇರಿ ಒಟ್ಟು ₹1.65 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನಾಲ್ವರ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಮೂಲದ ಶ್ರೀನಿವಾಸ್ ಮೀಸಿ, ವಿಜಯಪುರದ ಹುಸೇನ್ಸಾಬ ಮುಲ್ಲಾ, ಬಸವರಾಜ್ ಭಜಂತ್ರಿ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಸಿದ್ಧರಾಮ ಡಾಲೆ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮದ್ಯ ಮಾಫಿಯಾ ಜಾಲವನ್ನು ಭೇದಿಸಿರುವ ವಿಜಯಪುರ ಪೊಲೀಸರು, ಈ ಕಳ್ಳಸಾಗಣೆ ಜಾಲದ ಪ್ರಮುಖ ಕಿಂಗ್ಪಿನ್ ಹಾಗೂ ಇತರ ಆರೋಪಿಗಳ ಪತ್ತೆಗೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.