ಡೀಸೆಲ್ ದುಬಾರಿ, ಎತ್ತುಗಳ ಕೊರತೆ; ಸೈಕಲ್‌ಗೆ ಕುಂಟೆ ಜೋಡಿಸಿ ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿದ ರೈತ ದಂಪತಿ

ದಾವಣಗೆರೆ: ಎತ್ತುಗಳ ಕೊರತೆ ಹಾಗೂ ಟ್ರ್ಯಾಕ್ಟರ್‌ಗಳಿಗೆ ಹೆಚ್ಚುತ್ತಿರುವ ಡೀಸೆಲ್ ವೆಚ್ಚದ ನಡುವೆಯೇ ದಾವಣಗೆರೆ ಜಿಲ್ಲೆಯ ರೈತ ದಂಪತಿಯೊಬ್ಬರು ಕೃಷಿ ಕಾರ್ಯಕ್ಕೆ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಸೈಕಲ್‌ಗೆ ಎಡೆಕುಂಟೆ ಜೋಡಿಸಿ ಹೊಲದಲ್ಲಿ ಕಳೆ ತೆಗೆಯುವ ಮೂಲಕ ಗಮನ ಸೆಳೆದಿದ್ದಾರೆ. ಹರಿಹರ ತಾಲೂಕಿನ ಎರೆಹೊಸಹಳ್ಳಿ ಗ್ರಾಮದ ರೈತ ಸಂಜೀವಪ್ಪ ರೆಡ್ಡಿ ಮತ್ತು ಅವರ ಪತ್ನಿ, ಎರಡು ಎಕರೆ ಜಮೀನಿನಲ್ಲಿ ಬೆಳೆದಿರುವ ಮೆಕ್ಕೆಜೋಳದ ಬೆಳೆಯ ಮಧ್ಯೆ ಬೆಳೆದ ಕಳೆ ತೆಗೆಯಲು ಈ ವಿನೂತನ ಪ್ರಯೋಗ ಕೈಗೊಂಡಿದ್ದಾರೆ.

ಬಳಕೆಯಲ್ಲಿರದ ಹಳೆಯ ಸೈಕಲ್‌ಗೆ ಕಳೆ ತೆಗೆಯುವ ಕುಂಟೆಯನ್ನು ಅಳವಡಿಸಿ ಹೊಲದಲ್ಲಿ ಬಳಸುತ್ತಿದ್ದಾರೆ. ಇದರಿಂದ ಕಡಿಮೆ ವೆಚ್ಚದಲ್ಲಿ ಹಾಗೂ ಸುಲಭವಾಗಿ ಕಳೆ ನಿಯಂತ್ರಣ ಮಾಡಬಹುದು ಎಂದು ರೈತರು ತಿಳಿಸಿದ್ದಾರೆ. ಎತ್ತುಗಳು ಸುಲಭವಾಗಿ ಸಿಗುತ್ತಿಲ್ಲ. ಸಿಕ್ಕರೂ ಬಾಡಿಗೆ ದುಬಾರಿಯಾಗಿದೆ. ಇನ್ನು ಟ್ರ್ಯಾಕ್ಟರ್ ಬಳಸಬೇಕೆಂದರೆ ಡೀಸೆಲ್ ವೆಚ್ಚ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖರ್ಚು ಕಡಿಮೆ ಮಾಡಲು ಸೈಕಲ್ ಎಡೆಕುಂಟೆ ಉಪಯುಕ್ತವಾಗಿದೆ ಎಂದು ರೈತ ಸಂಜೀವಪ್ಪ ರೆಡ್ಡಿ ಹೇಳಿದ್ದಾರೆ. ರೈತನ ಈ ವಿನೂತನ ಕೃಷಿ ಪ್ರಯೋಗ ಇದೀಗ ಸ್ಥಳೀಯ ರೈತರ ಗಮನ ಸೆಳೆಯುತ್ತಿದ್ದು, ಕಡಿಮೆ ವೆಚ್ಚದ ಕೃಷಿ ತಂತ್ರಜ್ಞಾನದ ಉತ್ತಮ ಉದಾಹರಣೆಯಾಗಿ ಪರಿಣಮಿಸಿದೆ.

Leave a Reply

Your email address will not be published. Required fields are marked *

error: Content is protected !!