ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿಸಿದ ಶನಿವಾರ: ಜಿಲ್ಲೆಯನ್ನ ಬೆಚ್ಚಿಬೀಳಿಸಿದ ಸರಣಿ ದುರಂತಗಳು: ಒಂದೇ ದಿನ 7 ಮಂದಿ ಮೃತ್ಯು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶನಿವಾರ ವಿವಿಧ ದುರ್ಘಟನೆಗಳಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆಗಳು ವರದಿಯಾಗಿವೆ.

ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಭಾಗಗಳಲ್ಲಿ ನಡೆದ ರಸ್ತೆ ಅಪಘಾತಗಳು ಮತ್ತು ದೊಡ್ಡಬಳ್ಳಾಪುರದಲ್ಲಿ ಕೃಷಿ ಹೊಂಡ ದುರಂತ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿವೆ.

ದೇವನಹಳ್ಳಿ ತಾಲೂಕಿನ ರಾಣಿ ಕ್ರಾಸ್ ಬಳಿ ಡ್ಯೂಕ್ ಬೈಕ್‌ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಧರ್ಮವರಂ ಮೂಲದ ಕೆ. ಜಯಪ್ರಕಾಶ್ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮತ್ತೊಬ್ಬ ಸವಾರ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ–48ರ ನವಯುಗ ಟೋಲ್ ಸಮೀಪ ನಾಯಿ ಅಡ್ಡ ಬಂದ ಕಾರಣ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಈ ವೇಳೆ ರಸ್ತೆಗೆ ಬಿದ್ದಿದ್ದ ತುಮಕೂರು ಮೂಲದ ರಂಜನ್ ಕುಮಾರ್ (27) ಅವರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೊಸಕೋಟೆ ತಾಲೂಕಿನ ಹಲಸಳ್ಳಿ ಗೇಟ್ ಸಮೀಪ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಉದ್ಯೋಗ ಸಂದರ್ಶನಕ್ಕೆ ತೆರಳುತ್ತಿದ್ದ ಮೋನಿಷಾ (21) ಮೃತಪಟ್ಟಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಇನ್ನೊಂದು ಘಟನೆಯಲ್ಲಿ, ಹೊಸಕೋಟೆ ಸಮೀಪದ ದೊಡ್ಡಹುಲ್ಲೂರು ಬಳಿ ನೂತನ ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಮರ್ಸಿಡಿಸ್ ಬೆಂಜ್ ಕಾರು ಅಪಘಾತಕ್ಕೀಡಾಗಿ ಕಾರಿನಲ್ಲಿದ್ದ ಯುವತಿ ಶಹಜಿಯಾ ಶೇಖ್(28) ಮತ್ತು ಚಾಲಕ ರಿಜ್ವಾನ್(35) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ತೊಗರಿಘಟ್ಟ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ 10 ವರ್ಷದ ದಕ್ಷಾ ಹಾಗೂ 4 ವರ್ಷದ ಧನುಷ್ ಮೃತಪಟ್ಟಿದ್ದಾರೆ. ಆಟವಾಡಲು ತೆರಳಿದ್ದ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಹೊಂಡಕ್ಕೆ ಸಮರ್ಪಕ ಭದ್ರತೆ ಕಲ್ಪಿಸದ ಆರೋಪದಡಿ ಮಾಲೀಕನ ಮೇಲೆ ಪ್ರಕರಣ ದಾಖಲಾಗಿದೆ.

ಒಟ್ಟಾರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದ ಈ ದುರ್ಘಟನೆಗಳಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!