
ದೊಡ್ಡಬಳ್ಳಾಪುರ: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಅಪ್ಪ ಹಾಗೂ ಇಬ್ಬರು ಮಕ್ಕಳನ್ನೊಳಗೊಂಡ ಖತರ್ನಾಕ್ ಕಳ್ಳರ ಜಾಲವನ್ನು ದೊಡ್ಡಬೆಳವಂಗಲ ಠಾಣೆ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಮಹೇಶ್ @ ಓಟಿ, ರಘು ಜಿ, ಅಂಜನ್ ಕುಮಾರ್ ಎಂದು ಗುರುತಿಸಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿ ಗಂಗರೆಡ್ಡಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತರಿಂದ ಅಪಾರ ಮೌಲ್ಯದ ದೇವರ ಬೆಳ್ಳಿ ಕಿರೀಟಗಳು, ಚಿನ್ನಾಭರಣಗಳು ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ತನಿಖೆಯಲ್ಲಿ ಬಂಧಿತ ಗಂಗರೆಡ್ಡಿ ಹಾಗೂ ಆತನ ಪುತ್ರರಾದ ರಘು ಜಿ ಮತ್ತು ಅಂಜನ್ ಕುಮಾರ್ ದೇವಸ್ಥಾನ ಕಳ್ಳತನವನ್ನೇ ತಮ್ಮ ಕಸುಬಾಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಇವರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದರು ಎನ್ನಲಾಗಿದೆ.
ಆರೋಪಿಗಳು ಎಲ್ಲೇ ಜಾತ್ರೆ, ಪರುಷೆ ಅಥವಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದವೆಯೋ ಅಲ್ಲಿಗೆ ಆಟೋ, ಬೈಕ್ನಲ್ಲಿ ತೆರಳಿ ಮೊದಲೇ ಸಂಚು ರೂಪಿಸುತ್ತಿದ್ದರು. ಹಗಲಿನ ವೇಳೆಯಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನಿಸಿ, ರಾತ್ರಿ ಅಲ್ಲೇ ಮಲಗುವವರಂತೆ ನಾಟಕವಾಡುತ್ತಿದ್ದರು. ಬಳಿಕ ಭಕ್ತರು ಮತ್ತು ಗ್ರಾಮಸ್ಥರು ನಿದ್ರೆಗೆ ಜಾರಿದ ನಂತರ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದರು.
ಕಬ್ಬಿಣದ ರಾಡ್ ಬಳಸಿ ದೇವಸ್ಥಾನದ ಹುಂಡಿಗಳನ್ನು ಒಡೆದು ಹಣ ಕಳವು ಮಾಡುವುದು, ದೇವರ ವಿಗ್ರಹಗಳ ಮೇಲಿದ್ದ ಕಿರೀಟ, ಚೈನ್ ಸೇರಿದಂತೆ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುವುದು ಇವರ ಕಾರ್ಯವೈಖರಿಯಾಗಿತ್ತು. ಇದನ್ನು ಸವಾಲಾಗಿ ತೆಗೆದುಕೊಂಡ ದೊಡ್ಡಬೆಳವಂಗಲ ಪೊಲೀಸರು ಡಿವೈಎಸ್ ಪಿ ಪಾಂಡುರಂಗ ಮಾರ್ಗದರ್ಶನದಲ್ಲಿ, ಇನ್ಸ್ ಪೆಕ್ಟರ್ ಕಲ್ಲಪ್ಪ ನೇತೃತ್ವದ ತಂಡ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೇವಸ್ಥಾನ ಕಳ್ಳತನಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಸಿಸಿಟಿವಿಯಿಂದ ಸಿಕ್ಕ ಸುಳಿವು
ದೇವಾಲಯಗಳಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳ ತನಿಖೆ ಕೈಗೊಂಡ ದೊಡ್ಡಬೆಳವಂಗಲ ಠಾಣೆ ಇನ್ಸ್ಪೆಕ್ಟರ್ ಕಲ್ಲಪ್ಪ ನೇತೃತ್ವದ ತಂಡ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಚಲನವಲನದ ಮೇಲೆ ನಿಗಾ ಇಟ್ಟಿತ್ತು. ಮೇ 5ರ ಮುಂಜಾನೆ ಹೊನ್ನಾವರ ಗೇಟ್ ಬಳಿ ಗಸ್ತಿನಲ್ಲಿದ್ದ ಪೊಲೀಸರು ನಂಬರ್ ಪ್ಲೇಟ್ ಇಲ್ಲದ ಆಟೋ ಹಾಗೂ ಬೈಕ್ನಲ್ಲಿ ಸಂಚರಿಸುತ್ತಿದ್ದ ಮೂವರನ್ನು ಅನುಮಾನದ ಮೇರೆಗೆ ತಡೆದು ಪರಿಶೀಲನೆ ನಡೆಸಿದರು. ಆಟೋದಲ್ಲಿ ಕಬ್ಬಿಣದ ರಾಡ್ ಪತ್ತೆಯಾಗಿದ್ದು, ದಾಖಲೆಗಳ ಬಗ್ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ದೇವಸ್ಥಾನ ಕಳ್ಳತನದ ಜಾಲ ಬಯಲಾಯಿತು.
10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ಬೆಳಕಿಗೆ
ಬಂಧಿತರಿಂದ ವಿವಿಧ ದೇವಸ್ಥಾನಗಳಲ್ಲಿ ಕಳವು ಮಾಡಿದ್ದ ಬೆಳ್ಳಿ ಕಿರೀಟಗಳು, ಚಿನ್ನದ ತಾಳಿಗಳು, ಬೆಳ್ಳಿ ಚೊಂಬು, ಕಿವಿಯೋಲೆಗಳು ಸೇರಿದಂತೆ ಅಪಾರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಯಾವ್ಯಾವ ದೇವಸ್ಥಾನಗಳಲ್ಲಿ ಏನೇನು ಕಳ್ಳತನ…?
1.ದೊಡ್ಡಬೆಳವಂಗಲ ಹೋಬಳಿಯ ಹಾದ್ರಿಪುರ ಪಾಳ್ಯದ ಲಕ್ಷ್ಮಿ ದೇವಸ್ಥಾನದಲ್ಲಿ 7ಚಿನ್ನದ ತಾಳಿ, ಒಂದು ಬೆಳ್ಳಿ ಕಿರೀಟ ಕಳವು
2. ಮಧುರೆ ಹೋಬಳಿಯ ಕಾಡನೂರು ಗ್ರಾಮದ ಮಹೇಶ್ವರಮ್ಮ ದೇವಾಲಯದಲ್ಲಿ ಒಂದು ಬೆಳ್ಳಿ ಕಿರೀಟ, ಒಂದು ಬೆಳ್ಳಿ ಚೊಂಬು, ಬೆಳ್ಳಿ ತಾಳಿ ಕಳವು
3. ವಡಗೆರೆ ಗ್ರಾಮದಲ್ಲಿ ಮನೆ ಕಳ್ಳತನ-ಒಂದು ಜೊತೆ ಕಿವಿಯೋಲೆ
4. ಕಲ್ಲುದೇವನಹಳ್ಳಿ ಮಾರಮ್ಮ ದೇವಾಲಯದಲ್ಲಿ ಮೂರು ಚಿನ್ನದ ತಾಳಿ, ಮೂರು ಗುಂಡು ಕಳವು
5. ಮೆಳೇಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೂರು ಬೆಳ್ಳಿ ಕಿರೀಟ ಕಳವು
6. ವಿಜಯಪುರ ಓಂ ಶಕ್ತಿ ದೇವಸ್ಥಾನದಲ್ಲಿ ಮೂರು ಚಿನ್ನದ ತಾಳಿ, ಹುಂಡಿ ಹಣ ಕಳವು
7. ಕೋಡಿಹಳ್ಳಿ ಗ್ರಾಮದ ರಂಗನಾಥ್ ಎಂಬುವರ ಮನೆ ಕಳ್ಳತನಕ್ಕೆ ಯತ್ನ
8. ವಿಶ್ವನಾಥಪುರದ ಉಗನವಾಡಿ ಮುತ್ಯಾಲಮ್ಮ ದೇವಾಲಯದಲ್ಲಿ ಹುಂಡಿ ಹಣ ಕಳವು
9. ಕಾಡತಿಪ್ಪೂರು ಗ್ರಾಮದಲ್ಲಿನ ಅರಸಮ್ಮ, ಮಾರಮ್ಮ ದೇವಾಲಯದಲ್ಲಿ ಹುಂಡಿ ಕಳವು
10. ತಿಪ್ಪೂರ ಆನೆ ಲಿಂಗೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಕಳವು ಸೇರಿದಂತೆ ಇತರೆ ಕಳವು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ…

ಕೇಬಲ್ ಕಳ್ಳರ ಬಂಧನ
ದೊಡ್ಡಬೆಳವಂಗಲದ ಕನ್ನಮಂಗಲ ಸರ್ಕಾರಿ ಜಾಗದಲ್ಲಿ ಕುಸುಂ ಸಿ ಯೋಜನೆ ಅಡಿ ಸೌರವಿದ್ಯುತ್ ಸ್ಥಾಪಿಸುವ ಉದ್ದೇಶಕ್ಕಾಗಿ ಎಂ.ಇ.ಐ.ಎಲ್ ಕಂಪನಿ ವತಿಯಿಂದ 500 ಮೀಟರ್ಗಳ 3C*400 SQ MM ಕಂಡಕ್ಟರ್ ಕೇಬಲ್ ನ 4 ಡ್ರಮ್ ರೋಲರ್ ಗಳನ್ನು ಕನ್ನಮಂಗಲ ಹಾಗೂ ರಾಮದೇವನಹಳ್ಳಿ ಜಮೀನಿನೊಂದರಲ್ಲಿ ಹಾಕಲಾಗಿತ್ತು. ಇವುಗಳನ್ನು ಮಾ.25ರ ರಾತ್ರಿ, ಏ.13ರ ಮಧ್ಯದಲ್ಲಿ ಸೈಟ್ ಗಳಲ್ಲಿ ಹಾಕಿದ್ದ 490000/- ರೂ ಬೆಲೆ ಬಾಳುವ 4 ಕಂಡಕ್ಟರ್ ಕೇಬಲ್ ಕಳವು ಆಗಿದ್ದವು.
ಅದೇರೀತಿ ಕನಸವಾಡಿ ಗ್ರಾಮದ ಮನೆಯ ಮುಂದೆ ಗ್ರಾಮ ಪಂಚಾಯ್ತಿಯವರು ತಂದು ಹಾಕಿದ್ದ ಸುಮಾರು 35000/- ರೂ ಬೆಲೆ ಬಾಳುವ 300 ಮೀಟರ್ ಕೇಬಲ್ ಅನ್ನು ಮೇ.16ರಂದು ರಾತ್ರಿ ವೇಳೆಯಲ್ಲಿ ಕಳವು ಆಗಿತ್ತು. ಈ ಕುರಿತು ದೊಡ್ಡಬಳೆವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಮೇಲ್ಕಂಡ 2 ಪ್ರಕರಣಗಳ ಬೆನ್ನತ್ತಿದ್ದ ಪೊಲೀಸರಿಗೆ ಇಬ್ಬರು ಆರೋಪಿಗಳು ತಗಲಾಕ್ಕೊಂಡಿದ್ದಾರೆ.
ಬಂಧಿತ ಆರೋಪಿಗಳು
ಹುಸೇನ್ ಶೇಖ್(19), ಬಾಟೆಲ್ ಆಯುವ ಕೆಲಸ, ಆರೀಪ್ ಶೇಖ್(27) ಪೇಪರ್ ಆಯುವ ಕೆಲಸ.
ಬಂಧಿತರಿಂದ 3 ಲಕ್ಷ ಬೆಲೆ ಬಾಳುವ ಕಂಡಕ್ಟರ್ ಕೇಬಲ್ ಹಾಗೂ 35 ಸಾವಿರ ರೂ. ಬೆಲೆ ಬಾಳುವ 300 ಮೀಟರ್ ಕೇಬಲ್ ಹಾಗೂ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಕ್ಯಾಂಟರ್, ಒಂದು ಅಶೋಕ ಲೈಲ್ಯಾಂಡ್ ದೋಸ್ತ್ ಹಾಗೂ ಒಂದು ಆಟೋ ಹಾಗೂ ಬೈಕನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಸರಣಿ ದೇವಾಲಯ ಕಳ್ಳತನ, ಕೇಬಲ್ ಕಳ್ಳತನಕ್ಕೆ ಬ್ರೇಕ್: ಆರೋಪಿಗಳ ಬಂಧನದಿಂದ ಜನರಲ್ಲಿ ನೆಮ್ಮದಿ
ನಗರ ಹಾಗೂ ಗ್ರಾಮೀಣ ಪ್ರದೇಶದ ವಿವಿಧ ದೇವಾಲಯಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ನಡೆದ ಹಿನ್ನೆಲೆ ಭಕ್ತರು ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದರು. ದೇವಾಲಯಗಳ ಹುಂಡಿ ಹಣ, ಚಿನ್ನಾಭರಣ ಹಾಗೂ ಇತರೆ ಅಮೂಲ್ಯ ವಸ್ತುಗಳನ್ನು ಕಳವು, ಕೇಬಲ್ ಕಳ್ಳತನ ಮಾಡುತ್ತಿದ್ದ ಕಳ್ಳರ ಕೃತ್ಯದಿಂದ ಜನ ಬೆಚ್ಚಿಬಿದ್ದಿದ್ದರು.
ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಂಧನದಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದು, ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
ಆದರೆ ದೇವಾಲಯಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ವೇಳೆ ಪೊಲೀಸ್ ಬೀಟ್ಗಳನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೊಲೀಸ್ ಗಸ್ತು ಹೆಚ್ಚಾದರೆ ಕಳ್ಳತನ ಸೇರಿದಂತೆ ಇತರೆ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ದೇವಾಲಯಗಳ ಭದ್ರತೆಗೆ ಸಿಸಿಟಿವಿ ಅಳವಡಿಕೆ, ರಾತ್ರಿ ಪಹರೆ ಹಾಗೂ ನಿಯಮಿತ ಪೊಲೀಸ್ ಗಸ್ತು ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ ಎಂಬ ಒತ್ತಾಯವೂ ಕೇಳಿಬಂದಿದೆ.