
ದೇವನಹಳ್ಳಿ: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ದೆಹಲಿ ಪ್ರವಾಸಕ್ಕೆ ತೆರಳುವ ಮುನ್ನ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್, ತಮ್ಮ ತಂದೆ ಶಾಸಕ ಎನ್.ಎ. ಹ್ಯಾರಿಸ್ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.
ಇಷ್ಟು ದಿನ ಸಿಎಂ ಆಗುವ ಪ್ರಯತ್ನದಲ್ಲಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ದೆಹಲಿಗೆ ಹೋಗುತ್ತಿದ್ದೆವು. ಈಗ ಅವರು ಮುಖ್ಯಮಂತ್ರಿಗಳಾಗಿ ಮೊದಲ ಬಾರಿಗೆ ದೆಹಲಿಗೆ ಹೋಗುತ್ತಿದ್ದಾರೆ. ಉಪಮುಖ್ಯಮಂತ್ರಿಯಾಗಿದ್ದಾಗಲೂ ಜೊತೆಯಲ್ಲಿ ಹೋಗಿದ್ದೆವು. ಮುಖ್ಯಮಂತ್ರಿಗಳ ಜೊತೆಗೆ ಒಂದು ಬಾರಿ ಹೋಗಬೇಕು ಎಂಬ ಕಾರಣಕ್ಕೆ ಈ ಪ್ರವಾಸದಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಹೇಳಿದರು.
ತಮ್ಮ ತಂದೆ ಎನ್.ಎ. ಹ್ಯಾರಿಸ್ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಕಾಂಗ್ರೆಸ್ ಸರ್ಕಾರದ ಮೇಲೆ ನೂರಕ್ಕೆ ನೂರರಷ್ಟು ವಿಶ್ವಾಸವಿದೆ. ನನ್ನ ತಂದೆ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉತ್ತಮ ಕೆಲಸ ಮಾಡಿದ್ದಾರೆ. ಬಿಡಿಎ ಅಧ್ಯಕ್ಷರಾಗಿದ್ದಾಗಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಒಂದು ಅವಕಾಶ ನೀಡಿದರೆ ಪಕ್ಷಕ್ಕೂ ಒಳ್ಳೆಯ ಹೆಸರು ತರುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಪಕ್ಷದ ನಾಯಕರಿಗೆ ಮನವಿ ಮಾಡಿದ್ದೇವೆ. ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ನಲಪಾಡ್ ಹೇಳಿದರು.
ಬಿಟ್ಕಾಯಿನ್ ಪ್ರಕರಣದ ಕುರಿತು ಸ್ಪಷ್ಟನೆ
ಬಿಟ್ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಬಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಲಪಾಡ್, ನನಗೆ ಯಾವುದೇ ನೋಟಿಸ್ ಬಂದಿಲ್ಲ. ಚಾರ್ಜ್ಶೀಟ್ ಕೂಡ ಬಂದಿಲ್ಲ. ನಿಮಗೆ ಈ ಮಾಹಿತಿ ಹೇಗೆ ಗೊತ್ತಾಯಿತು? ನಮ್ಮ ಬೆಳವಣಿಗೆ ಇಷ್ಟಪಡದ ಕೆಲವರು ಸಚಿವ ಸ್ಥಾನ ತಪ್ಪಿಸಲು ನೋಟಿಸ್ ಬಂದಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿದರು.