
ದೊಡ್ಡಬಳ್ಳಾಪುರ: ಸ್ಫೂರ್ತಿ ಕನ್ನಡ ಕಲಾ ಟ್ರಸ್ಟ್ ವತಿಯಿಂದ ‘ಕಣ್ಣು ತೆರೆಸಿದ ಹೆಣ್ಣು’ ಕಾರ್ಯಕ್ರಮದ ಅಂಗವಾಗಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಪೇದೆಗಳನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಪೊಲೀಸರಿಗೆ ಹಣ್ಣು-ಹಂಪಲು, ಸೀರೆ, ಅರಿಶಿಣ, ಕುಂಕುಮ, ಹೂವು ಹಾಗೂ ಬಳೆಗಳನ್ನು ನೀಡಿ ಗೌರವಿಸಲಾಯಿತು. ನಿತ್ಯ ಸಾರ್ವಜನಿಕರ ದೂರುಗಳು, ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಗಳ ನಡುವೆ ಕಾರ್ಯನಿರ್ವಹಿಸುವ ಮಹಿಳಾ ಪೊಲೀಸರಿಗೆ ಈ ಕಾರ್ಯಕ್ರಮ ವಿಶೇಷ ಸಂತಸ ಮೂಡಿಸಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಫೂರ್ತಿ ಕನ್ನಡ ಕಲಾ ಟ್ರಸ್ಟ್ ಅಧ್ಯಕ್ಷ, ರೈತ ಎಂ.ಸಿ. ರಾಜಣ್ಣ, ಮಹಿಳಾ ಪೊಲೀಸರು ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕಿಂತ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಸೇವೆಯಲ್ಲಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡುವ ಅವರ ಕಾರ್ಯ ಶ್ಲಾಘನೀಯವಾಗಿದೆ. ಅವರ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಿಂದ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು. ಸಮಾಜದ ಭದ್ರತೆಗಾಗಿ ಶ್ರಮಿಸುತ್ತಿರುವ ಮಹಿಳಾ ಪೊಲೀಸರ ಸೇವೆಯನ್ನು ಗುರುತಿಸಿ ಗೌರವಿಸಿದ ಸ್ಫೂರ್ತಿ ಕನ್ನಡ ಕಲಾ ಟ್ರಸ್ಟ್ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.