ಬೇಸಿಗೆ ರಜೆ ಬಳಿಕ ಶಾಲೆಗಳಿಗೆ ಮರುಕಳಿಸಿದ ವಿದ್ಯಾರ್ಥಿಗಳು: ಹಬ್ಬದ ವಾತಾವರಣದಲ್ಲಿ ಶಾಲಾ ಪ್ರಾರಂಭೋತ್ಸವ

ದೊಡ್ಡಬಳ್ಳಾಪುರ, ಜೂನ್ 1: ಬೇಸಿಗೆ ರಜೆ ಬಳಿಕ ಸೋಮವಾರದಿಂದ ರಾಜ್ಯಾದ್ಯಂತ ಶಾಲೆಗಳು ಪುನರಾರಂಭಗೊಂಡಿದ್ದು, 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಧಿಕೃತ ಚಾಲನೆ ದೊರೆತಿದೆ. ಶಾಲೆಗಳತ್ತ ವಿದ್ಯಾರ್ಥಿಗಳು ಉತ್ಸಾಹದಿಂದ ಹೆಜ್ಜೆ ಹಾಕಿದ್ದು, ಎಲ್ಲೆಡೆ ಶಾಲಾ ಪ್ರಾರಂಭದ ಸಂಭ್ರಮ ಮನೆಮಾಡಿತ್ತು.

ಶಾಲಾ ಶಿಕ್ಷಣ ಇಲಾಖೆ ಸೂಚನೆಯಂತೆ ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಿ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಶಾಲಾ ಆವರಣಗಳನ್ನು ತಳಿರು-ತೋರಣ, ರಂಗೋಲಿ ಹಾಗೂ ಬಲೂನುಗಳಿಂದ ಅಲಂಕರಿಸಲಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂವು ನೀಡಿ ಬರಮಾಡಿಕೊಂಡರು. ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿ ತಿನಿಸು ನೀಡುವ ಮೂಲಕ ಮಕ್ಕಳ ಸಂತಸವನ್ನು ಹೆಚ್ಚಿಸಲಾಯಿತು.

ಶಾಲೆ ಆರಂಭದ ಮೊದಲ ದಿನವೇ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಪೋಷಕರ ಸಭೆ ನಡೆಸುವಂತೆ ಇಲಾಖೆ ಸೂಚಿಸಿದ್ದು, ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಮೊದಲ 15 ದಿನಗಳ ಕಾಲ ‘ಸೇತುಬಂಧ’ ಕಾರ್ಯಕ್ರಮದಡಿ ಪುನರಾವರ್ತನಾ ತರಗತಿಗಳನ್ನು ನಡೆಸಲು ಆದೇಶಿಸಲಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಡಿಡಿಪಿಐ ಬೈಲಾಂಜಿನಪ್ಪ ಭಾಗವಹಿಸಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ವರ್ಷದ ಶುಭಾಶಯ ಕೋರಿದ್ದಾರೆ. “ಭವ್ಯ ಕರ್ನಾಟಕದ ಭವಿಷ್ಯದ ಆಶಾಕಿರಣಗಳಾದ ನಮ್ಮ ನಾಡಿನ ಹೆಮ್ಮೆಯ ವಿದ್ಯಾರ್ಥಿ ಮಿತ್ರರಿಗೆ ಹೊಸ ಶೈಕ್ಷಣಿಕ ವರ್ಷದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

ಶಾಲೆ ಎಂಬ ಜ್ಞಾನ ದೇಗುಲದಲ್ಲಿ ನಿಮ್ಮ ಕನಸುಗಳು ಚಿಗುರಲಿ, ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮೂಲಕ ನೀವು ಅಂದುಕೊಂಡ ಗುರಿ ನಿಮ್ಮದಾಗಲಿ. ನಿಮ್ಮ ಸಾಧನೆಗಳು ನಮ್ಮ ಹೆಮ್ಮೆಯ ರಾಜ್ಯಕ್ಕೆ ಕೀರ್ತಿ ತರಲಿ” ಎಂದು ಅವರು ಹಾರೈಸಿದ್ದಾರೆ.

ರಾಜ್ಯದಾದ್ಯಂತ ಶಾಲೆಗಳು ಪುನರಾರಂಭಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮತ್ತು ಕಲಿಕೆಯ ಚೈತನ್ಯ ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!