ರಾಜ್ಯ ರಾಜಕೀಯದಲ್ಲಿ ಮತ್ತೆ ತೀವ್ರಗೊಂಡ ನಾಯಕತ್ವ ಬದಲಾವಣೆಯ ಚರ್ಚೆ: ‘ಮುಂದಿನ ಸಿಎಂ ಡಿ.ಕೆ. ಶಿವಕುಮಾರ್’ ಎಂಬ ಪೋಸ್ಟರ್‌, ಬ್ಯಾನರ್‌ ಮತ್ತು ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ವೈರಲ್

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ತೀವ್ರಗೊಂಡಿದ್ದು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವದಂತಿಗಳು ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸರಣಿ ಸಭೆಗಳ ಬೆನ್ನಲ್ಲೇ ಈ ಚರ್ಚೆಗಳು ಮತ್ತಷ್ಟು ವೇಗ ಪಡೆದುಕೊಂಡಿವೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದ ಬಳಿಕ, ಅಧಿಕಾರ ಹಂಚಿಕೆಯ ಸೂತ್ರದಡಿ ಎರಡೂವರೆ ವರ್ಷಗಳ ನಂತರ ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡುವ ಬಗ್ಗೆ ಆಂತರಿಕ ಒಪ್ಪಂದ ನಡೆದಿತ್ತು ಎನ್ನಲಾಗುತ್ತಿದೆ. ಈಗ ಆ ಅವಧಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ಚುರುಕುಗೊಂಡಿದ್ದು, ಡಿಕೆಶಿ ಹೆಸರೇ ಬಹುತೇಕ ಅಂತಿಮವಾಗಿದೆ ಎಂಬ ನಂಬಿಕೆ ಕಾರ್ಯಕರ್ತರಲ್ಲಿ ಬಲಪಡುತ್ತಿದೆ.

ಆದರೆ, ಈ ಕುರಿತು ಕಾಂಗ್ರೆಸ್ ಹೈಕಮಾಂಡ್‌ನಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಬಣಗಳ ನಡುವಿನ ರಾಜಕೀಯ ಚಟುವಟಿಕೆಗಳು ಕುತೂಹಲ ಕೆರಳಿಸಿದ್ದು, ಅಂತಿಮ ತೀರ್ಮಾನಕ್ಕಾಗಿ ರಾಜ್ಯ ರಾಜಕೀಯ ಕಾದುನೋಡುವ ಸ್ಥಿತಿಯಲ್ಲಿದೆ. ಹೈಕಮಾಂಡ್ ಅಧಿಕೃತ ನಿರ್ಧಾರ ಪ್ರಕಟಿಸುವವರೆಗೆ ಯಾವುದೇ ಸಂಭ್ರಮಾಚರಣೆ ಮಾಡಬಾರದು ಎಂದು ಪಕ್ಷದ ಹಿರಿಯ ನಾಯಕರು ಕಾರ್ಯಕರ್ತರಿಗೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.

ಇದೀಗ ಮೇ 28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದ್ದಂತೆ, ರಾಜ್ಯದ ಹಲವು ಭಾಗಗಳಲ್ಲಿ ಡಿ.ಕೆ ಶಿವಕುಮಾರ್ ಬೆಂಬಲಿಗರು ವಿಜಯೋತ್ಸವ ಆರಂಭಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂಭಾಗ, ರಾಮನಗರ, ಕನಕಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.

‘ಮುಂದಿನ ಸಿಎಂ ಡಿ.ಕೆ. ಶಿವಕುಮಾರ್’ ಎಂಬ ಪೋಸ್ಟರ್‌ಗಳು, ಬ್ಯಾನರ್‌ಗಳು ಮತ್ತು ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ವೈರಲ್ ಆಗುತ್ತಿದ್ದು, ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಹೈವೋಲ್ಟೇಜ್ ವಾತಾವರಣ ನಿರ್ಮಾಣವಾಗಿದೆ. ಆದರೆ ಅಧಿಕೃತ ಘೋಷಣೆ ಇನ್ನೂ ಹೊರಬೀಳದಿರುವುದರಿಂದ, ಈ ಎಲ್ಲ ಬೆಳವಣಿಗೆಗಳು ರಾಜಕೀಯ ವದಂತಿಗಳ ಹಂತದಲ್ಲೇ ಉಳಿದಿವೆ.

Leave a Reply

Your email address will not be published. Required fields are marked *

error: Content is protected !!