ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ- ಕಾನೂನು ಬಾಹಿರ ಚಟುವಟಿಕೆ ಸಂಪೂರ್ಣವಾಗಿ ತ್ಯಜಿಸಬೇಕು- ಪೊಲೀಸ್ ಮೇಷ್ಟ್ರಿಂದ ರೌಡಿಗಳಿಗೆ ಕಾನೂನು ಪಾಠ: ಮಿಟ್ಟೆ ಗ್ಯಾಂಗ್ ಗೆ ವಿಶೇಷ ವಾರ್ನಿಂಗ್

ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ. ನೆಮ್ಮದಿ ಕಳೆದುಕೊಂಡು, ಕುಟಂಬದಿಂದ ದೂರಾವಾಗಿ ಭಯಭೀತಿಯಲ್ಲಿ ಜೀವನ ಮಾಡಬೇಕಷ್ಟೇ. ಹೀಗಾಗಿ ಅಕ್ರಮ, ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣವಾಗಿ ತ್ಯಜಿಸಿ ಉತ್ತಮ ನಾಗರಿಕರಾಗಿ ಜೀವನ ಮಾಡಬೇಕು ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ ತಿಳಿಸಿದರು.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಹಮ್ಮಿಕೊಂಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳ ಪರೇಡ್ ನಲ್ಲಿ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ರೌಡಿಯಿಸಂ ಜೀವನವನ್ನು ಹಾಳು ಮಾಡುವುದಲ್ಲದೆ ಜೀವನ ಪರ್ಯಂತ ರೌಡಿಶೀಟರ್ ಪಟ್ಟ ಕಟ್ಟಿಕೊಂಡು ಬದುಕಬೇಕಾಗುತ್ತದೆ. ನೆಮ್ಮದಿ ಜೀವನಕ್ಕಾಗಿ ಕೂಲಿ ಕೆಲಸ ಮಾಡಿದರೂ ಪರವಾಗಿಲ್ಲ ಕುಟುಂಬದೊಂದಿಗೆ ಖುಷಿಯಿಂದ ಜೀವನ ಸಾಗಿಸಬೇಕು. ಎಲ್ಲಾರು ಕಾನೂನನ್ನು ಗೌರವಿಸಬೇಕು. ರೌಡಿ ಚಟುವಟಿಕೆ, ಕಾನೂನು ಬಾಹಿರ ಕೆಲಸಗಳು ಹೀಗೆ ಮುಂದುವರೆದರೆ ಗಡಿಪಾರು ಮಾಡಲಾಗುವುದು. ಹತ್ತು, ಇಪ್ಪತ್ತು ವರ್ಷಗಳಾದರೂ ರೌಡಿಶೀಟರ್ ಪಟ್ಟ ಹೋಗುವುದಿಲ್ಲ. ಕಳ್ಳತನ, ಕೊಲೆ, ದೌರ್ಜನ್ಯ ಮಾಡಿದರೆ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕಾನೂನು ಬಿಗಿಯಾಗಿದೆ. ಕುಟುಂಬಸ್ಥರು ಗೌರವ ನೀಡುವಷ್ಟು ರೀತಿಯಲ್ಲಿಯಾದರೂ ಜೀವನ ಮಾಡಿ. ಪೊಲೀಸರಿಗೆ ತಿಳಿಯದಂತೆ ಸ್ಥಳ, ಫೋನ್ ನಂಬರ್ ಬದಲಾವಣೆ ಮಾಡಬಾರದು. ಕಾನೂನಿಗೆ ಬೆಲೆ ಕೊಟ್ಟು ಸಮಾಜದಲ್ಲಿ ಒಳ್ಳೆಯವರಾಗಿ ಬದುಕಿ. ಮಾದರಿ ಜೀವನ ನಡೆಸಿದರೆ ರೌಡಿ ಶೀಟರ್ ಬಂದ್ ಮಾಡಲಾಗುವುದು ಎಂದರು.

ರೌಡಿಗಳಿಗೆ ಸಂಬಂಧಿಸಿದ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ವಾಹನ ದಾಖಲೆಗಳು ಸೇರಿದಂತೆ ಇತರೆ ದಾಖಲಾತಿಗಳನ್ನು ಸಂಗ್ರಹಿಸಬೇಕು.‌ ಸದಾ ರೌಡಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿರಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಮಿಟ್ಟೆ ಗ್ಯಾಂಗ್ ಗೆ ವಿಶೇಷ ವಾರ್ನಿಂಗ್ ನೀಡಲಾಯಿತು.

ಈ ವೇಳೆ ಸಬ್ ಇನ್ಸ್ ಪೆಕ್ಟರ್, ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು…

Leave a Reply

Your email address will not be published. Required fields are marked *

error: Content is protected !!