ಮೆಜೆಸ್ಟಿಕ್‌ನಿಂದ ಘಾಟಿ ಸುಬ್ರಮಣ್ಯಕ್ಕೆ ಬಿಎಂಟಿಸಿ ಹೊಸದಾಗಿ ನೇರ ಬಸ್‌ ಸೇವೆ ಆರಂಭ

ಬೆಂಗಳೂರು: ಬೆಂಗಳೂರು‌ ನಗರ ಹಾಗೂ ಗ್ರಾಮಾಂತರ ಭಾಗಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಿಎಂಟಿಸಿ(Bangalore Metropolitan Transport Corporation) ಮೇ 18ರಿಂದ ಹೊಸ ಬಸ್ ಮಾರ್ಗಗಳನ್ನು ಆರಂಭಿಸಲು ಮುಂದಾಗಿದೆ.

ದೇವನಹಳ್ಳಿ, ವಿಜಯಪುರ, ಘಾಟಿ ಸುಬ್ರಮಣ್ಯ ದೇವಸ್ಥಾನ ಹಾಗೂ ನಂದಿ ಕ್ರಾಸ್ ಭಾಗಗಳಿಗೆ ಮೂರು ಹೊಸ ಮಾರ್ಗಗಳಲ್ಲಿ ಬಸ್ ಸೇವೆ ವಿಸ್ತರಣೆ ಮಾಡಲಾಗುತ್ತಿದೆ.

ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ ಹೊಸ ಮಾರ್ಗಗಳನ್ನು ಪರಿಚಯಿಸಲಾಗಿದ್ದು, ಉದ್ಯೋಗಿಗಳು, ವಿದ್ಯಾರ್ಥಿಗಳು, ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಈ ಸೇವೆ ನೆರವಾಗಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸದಾಗಿ ಆರಂಭವಾಗುತ್ತಿರುವ ಇಎಕ್ಸ್-298ಎಂಪಿ ಎಕ್ಸ್‌ಪ್ರೆಸ್ ಸೇವೆ ಕೆಂಪೇಗೌಡ ಬಸ್ ನಿಲ್ದಾಣದಿಂದ ವಿಜಯಪುರದವರೆಗೆ ಸಂಚರಿಸಲಿದೆ. ಈ ಮಾರ್ಗದಲ್ಲಿ ಹೆಬ್ಬಾಳ, ಯಲಹಂಕ ಹಾಗೂ ದೇವನಹಳ್ಳಿ ಮೂಲಕ ಸೀಮಿತ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 8 ಬಸ್‌ಗಳು ಕಾರ್ಯಾಚರಿಸಲಿದ್ದು, ಪ್ರತಿದಿನ 47 ಸುತ್ತುವಳಿ ಸೇವೆ ನೀಡಲಾಗುತ್ತದೆ.

ಇದೇ ವೇಳೆ 285ಎಂವಿ ಮಾರ್ಗದ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ಶ್ರೀ ಘಾಟಿ ಸುಬ್ರಹ್ಮಣ್ಯ ದೇಬಸ್ಥಾನದವರೆಗೆ ಸಂಚರಿಸಲಿವೆ. ಹೆಬ್ಬಾಳ, ಯಲಹಂಕ, ಎನ್‌ಇಎಸ್ ಹಾಗೂ ದೊಡ್ಡಬಳ್ಳಾಪುರ ಮಾರ್ಗವಾಗಿ ಓಡುವ ಈ ಸೇವೆ ದೇವಸ್ಥಾನಕ್ಕೆ ತೆರಳುವ ಭಕ್ತಾದಿಗಳಿಗೆ ಹೆಚ್ಚು ಅನುಕೂಲಕರವಾಗಲಿದೆ. ಈ ಮಾರ್ಗದಲ್ಲಿ 5 ಬಸ್‌ಗಳು ಮತ್ತು 18 ಸುತ್ತುವಳಿ ಸೇವೆ ಲಭ್ಯವಾಗಲಿದೆ.

ಅದೇ ರೀತಿ 298ಎಂಡಬ್ಲ್ಯೂ ಮಾರ್ಗದ ಬಸ್‌ಗಳು ದೇವನಹಳ್ಳಿಯಿಂದ ನಂದಿ ಕ್ರಾಸ್ ವರೆಗೆ ಸಂಚರಿಸಲಿವೆ. ಆವತಿ ಹಾಗೂ ವೆಂಕಟಗಿರಿ ಕೋಟೆ ಮಾರ್ಗವಾಗಿ ಓಡುವ ಈ ಸೇವೆ ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳಿಗೆ ನೆರವಾಗಲಿದೆ. ಈ ಮಾರ್ಗದಲ್ಲಿ 3 ಬಸ್‌ಗಳು ಕಾರ್ಯಾಚರಿಸಲಿದ್ದು, 60 ಸುತ್ತುವಳಿ ಸೇವೆ ನಿಗದಿಪಡಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!