ಮಿತಿ ಮೀರಿದ ಬೈಕ್ ಕಳ್ಳರ ಹಾವಳಿ: ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಜನ ಒತ್ತಾಯ

ದೊಡ್ಡಬಳ್ಳಾಪುರ: ನಗರದಲ್ಲಿ ಬೈಕ್ ಕಳ್ಳರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಜನಸಂದಣಿ ಇರುವ ಪ್ರದೇಶಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕ್ ಮಾಡಿರುವ ಬೈಕ್‌ಗಳನ್ನು ಟಾರ್ಗೆಟ್ ಮಾಡುತ್ತಿರುವ ಖದೀಮರು ನಿರಂತರವಾಗಿ ಕಳ್ಳತನ ನಡೆಸುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ನಗರದ ಬಸವಭವನ ಸಮೀಪದ ಎಸ್‌ಎಲ್‌ವಿ ಲಾಡ್ಜ್ ಬಳಿ ಏಪ್ರಿಲ್ 9ರಂದು ರಾತ್ರಿ ಸುಮಾರು 8:39ರ ವೇಳೆಗೆ ಪಲ್ಸರ್ ಬೈಕ್ ನಿಲ್ಲಿಸಿ ಫಾಕ್ಸ್‌ಕಾನ್ ಕಂಪನಿಗೆ ಕೆಲಸಕ್ಕೆ ತೆರಳಿದ್ದ ಬೈಕ್ ಮಾಲೀಕ, ರಾತ್ರಿ ಪಾಳಿ ಕೆಲಸ ಮುಗಿಸಿ ಬೆಳಗ್ಗೆ ವಾಪಸ್ ಬಂದಾಗ ಬೈಕ್ ನಾಪತ್ತೆಯಾಗಿರುವುದು ಗೊತ್ತಾಗಿದೆ. ಈ ಸಂಬಂಧ ಮೇ 15ರಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬೈಕ್ ಕದ್ದ ಆರೋಪಿಯು ಬಸವಭವನ ಪ್ರದೇಶದಿಂದ ದಾಬಸ್‌ಪೇಟೆ ಮಾರ್ಗವಾಗಿ ತುಮಕೂರು ಕಡೆಗೆ ತೆರಳಿರುವುದು ಬೆಳಕಿಗೆ ಬಂದಿದೆ. ಸದ್ಯ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ನಗರ ಠಾಣಾ ಪೊಲೀಸ್ ಸಿಬ್ಬಂದಿ ಕಳ್ಳನ ಜಾಡು ಹಿಡಿದು ದಾಬಸ್ ಪೇಟೆ, ಕ್ಯಾತಸಂದ್ರ, ತುಮಕೂರು, ಹಿರಿಯೂರು, ಚಿತ್ರದುರ್ಗ, ದಾವಣಗೆರೆ ಬಾರ್ಡರ್ ವರೆಗೂ ಹೋಗಿದ್ದಾರೆ.‌ ಆದರೆ, ಚಾಲಾಕಿ ಕಳ್ಳ ಇನ್ನೂ ಪತ್ತೆಯಾಗಿರುವುದಿಲ್ಲ. ಆದರೆ, ಪೊಲೀಸರು ಕಳ್ಳನ ಪತ್ತೆಯಲ್ಲಿ ಕಾರ್ಯನಿರತರಾಗಿದ್ದಾರೆ…

ನಗರದಲ್ಲಿ ಪದೇಪದೇ ಬೈಕ್ ಕಳ್ಳತನ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ನಗರದ ಪ್ರಮುಖ ರಸ್ತೆ, ವೃತ್ತ, ಕಚೇರಿ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಬೈಕ್ ಕಳ್ಳರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

 

ವಿಶೇಷ ಸೂಚನೆ

ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡದೇ ನಿಗದಿತ ಪಾರ್ಕಿಂಗ್ ಸ್ಥಳದಲ್ಲಿ ಮಾತ್ರ ವಾಹನಗಳನ್ನು ನಿಲುಗಡೆ ಮಾಡಿದರೆ ಕಳ್ಳತನವನ್ನು ತಡೆಗಟ್ಟಬಹುದು.

Leave a Reply

Your email address will not be published. Required fields are marked *

error: Content is protected !!