
ಮೇ.6ರ ರಾತ್ರಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಹಿಟ್ ಅಂಡ್ ರನ್ ಗೆ ದೇವನಹಳ್ಳಿ ತಾಲೂಕಿನ ಮುದುಗುರ್ಕಿ ಗ್ರಾಮದ ವ್ಯಕ್ತಿ ಸುಧಾಕರ್(35) ಸಾವನ್ನಪ್ಪಿದ್ದು, ಈ ಹಿನ್ನೆಲೆ ಸತತವಾಗಿ ಅಪಘಾತಗಳಿಂದ ನಲುಗಿಹೋಗಿರುವ ಗ್ರಾಮಸ್ಥರಿಂದ ಮೇ.7ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಶವ ಇಟ್ಟು ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ದೇವನಹಳ್ಳಿಯ ಮುದುಗುರ್ಕಿ ಗ್ರಾಮಕ್ಕೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಹಾಗೂ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಭೇಟಿ ನೀಡಿ ಅಪಘಾತದಿಂದ ಸಾವನಪ್ಪಿದ ಮೃತ ಸುಧಾಕರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಘಟನಾ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಈ ಹಿಂದೆ ಅನೇಕ ಅಪಘಾತಗಳಲ್ಲಿ ಹಲವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಂಡರ್ ಪಾಸ್ (ಕೆಳಸೇತುವೆ)ಗೆ ಆಗ್ರಹಿಸಿದ ಆ ಭಾಗದ ಮುಖಂಡರು, ಸಾರ್ವಜನಿಕರು ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ರವರಿಗೆ ಮನವಿ ಸಲ್ಲಿಸಿದರು.
ಗ್ರಾಮಸ್ಥರ ಅಹವಾಲು ಆಲಿಸಿದ ಸಚಿವರು, ಮುದಗುರ್ಕಿ ಅಪಘಾತದಲ್ಲಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ,ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವು ನೀಡಲಾಗುವುದು ಎಂದು ತಿಳಿಸಿದರು.
ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಂಧ್ರದ ಪೆನುಗೊಂಡ ವರಗೆ 2400 ಕೋಟಿ ರೂ. ವೆಚ್ಚದಲ್ಲಿ 10 ಪಥದ ರಸ್ತೆ ನಿರ್ಮಾಣ ಮಾರ್ಚ್ ನಿಂದ ಆರಂಭಗೊಳ್ಳುತಿದ್ದು, ಎಲ್ಲಾ ಪ್ರಮುಖ ಗ್ರಾಮಗಳಲ್ಲಿ ಬೆಂಗಳೂರು ಮೈಸೂರು ಹೈವೇ ಮಾದರಿಯಲ್ಲಿ ಅಂಡರ್ ಪಾಸ್ ಗಳು ಆಗಲಿದ್ದು ಶಾಶ್ವತ ಪರಿಹಾರ ಸಿಗಲಿದೆ ಎಂದರು.
ತಕ್ಷಣದ ಕ್ರಮವಾಗಿ ಮುದುಗುರ್ಕಿಯಿಂದ ಆವತಿವರಗೆ ರಸ್ತೆ ಬದಿಯಲ್ಲಿ ಲಾರಿ ಸೇರಿದಂತೆ ಇತರೆ ವಾಹನಗಳ ನಿಲುಗಡೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗುವುದು. ಕಾನೂನಿನ ಪ್ರಕಾರ ರಸ್ತೆಯನ್ನು ಈ ರೀತಿ ತೆರವು ಮಾಡಲು ಅವಕಾಶವಿಲ್ಲ, ತಾತ್ಕಾಲಿಕವಾಗಿ ಟ್ರಾಫಿಕ್ ಪೊಲೀಸ್ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಒದಗಿಸಲಿದ್ದಾರೆ ಎಂದರು. ಹಾಗೂ ಹೈಮಾಸ್ಟ್ ದೀಪಕ್ಕೂ ವ್ಯವಸ್ಥೆ ಮಾಡಲು ಸೂಚಿಸಲಾಗುವುದೆಂದರು.
ಹತ್ತು ಪಥದ ರಸ್ತೆ ನಿರ್ಮಾಣ ಆಗಲಿದೆ. ಆಗ ಪ್ರತಿಯೊಂದು ಹಳ್ಳಿಗಳಿಗೂ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತದೆ. ಅಲ್ಲಿಯವರಗೆ ತಾತ್ಕಾಲಿಕ ಪರಿಹಾರ ಕೈಗೊಳ್ಳಬೇಕು. ರಸ್ತೆ ಬದಿಯಲ್ಲಿ ಯಾವುದೇ ವಾಹನಗಳನ್ನ ನಿಲ್ಲಿಸದಂತೆ ಪೊಲೀಸರಿಗೆ ತಾಕೀತು ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿ ಜಯಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರಾಜಣ್ಣ ಉಪಾಧ್ಯಕ್ಷ ನಾರಾಯಣ ಸ್ವಾಮಿ, ಮುಖಂಡರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.