
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ಬೈಕ್ ಕಳ್ಳರ ಕೈಚಳಕ ಮತ್ತೆ ಬೆಳಕಿಗೆ ಬಂದಿದೆ. ನಗರದ ನಂದಶ್ರೀ ಕಲ್ಯಾಣ ಮಂಟಪದ ಬಳಿ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯನ್ನು ಖದೀಮರು ಕಳ್ಳತನ ಮಾಡಿದ್ದಾರೆ.
ಒಂದು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಮತ್ತೊಂದು ಬೈಕ್ ಕದ್ದುಕೊಂಡು ಪರಾರಿಯಾಗಿದ್ದಾರೆ. ಕಳ್ಳತನದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಗೊಂಡಿದೆ.

ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಬಂದ ಆರೋಪಿಗಳು, ಕಾಲಿನಿಂದ ಹ್ಯಾಂಡಲ್ ಲಾಕ್ ಮುರಿದು ಬೈಕ್ ಎಗರಿಸಿರುವುದು ದೃಶ್ಯಗಳಲ್ಲಿ ಕಾಣಿಸಿದೆ. ವೀಲಿಂಗ್ ಮಾಡುವ ಪುಂಡರೇ ಈ ಕೃತ್ಯಕ್ಕೆ ಕಾರಣರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಘಟನೆ ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.