
ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಆದಿಶಕ್ತ್ಯಾತ್ಮಕ ದ್ರೌಪದಾದೇವಿ ಕರಗ ಮಹಹೋತ್ಸವ ಅಂಗವಾಗಿ ಹಸಿ ಕರಗ ಉತ್ಸವ ಸಂಭ್ರಮದಿಂದ ನೆರವೇರಿತು.
ಹಸಿ ಕರಗ ಉತ್ಸವವನ್ನು ಸಹಸ್ರಾರು ಜನ ವೀಕ್ಷಿಸಿದರು. ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿ ಪೂಜಾರಿ ವೈ.ಭೀಮರಾಜ್ ಹಸಿ ಕರಗವನ್ನು ಹೊತ್ತು ಕರಗದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ನಗರದ ಗಗನಾರ್ಯಸ್ವಾಮಿ ಮಠದಿಂದ ಹೊರಟ ಉತ್ಸವ ಹಳೇ ಬಸ್ ನಿಲ್ದಾಣ, ಶ್ರೀ ನೆಲದಾಂಜನೇಯಸ್ವಾಮಿ ದೇವಾಲಯ, 7 ಸುತ್ತಿನ ಕೋಟೆ, ತೂಬಗೆರೆ ಪೇಟೆ, ವನ್ನಿಗರಪೇಟೆ ಮೊದಲಾದೆಡೆ ಸಂಚರಿಸಿ ದೇವಾಲಯದ ಬಳಿ ಆಗಮಿಸಿತು.
ಶುಕ್ರವಾರ ರಾತ್ರಿ ನಡೆಯಲಿರುವ ಶ್ರೀಆದಿಶಕ್ತ್ಯಾತ್ಮಕ ದ್ರೌಪದಾದೇವಿ ಕರಗ ಮಹೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ದೇವಾಲಯವನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿದೆ.
ನಗರದ ವಿವಿಧ ವೃತ್ತಗಳಲ್ಲಿ ತಮಿಳುನಾಡು ಕಲಾವಿದರಿಂದ ತಯಾರಿಸಲಾದ ವಿವಿಧ ದೇವತೆಗಳ ವಿದ್ಯುತ್ ದೀಪಾಲಂಕಾರ, ಬೃಹತ್ ಕಟೌಟು ಮೆರುಗು ನೀಡಿವೆ. ಕರಗದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಗಣ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ ನಡೆಯಿತು. ಕರಗ ಉತ್ಸವದ ದಿನದವರೆಗೆ ನಿತ್ಯ ಅಭಿಷೇಕ, ಪೊಂಗಲ್ ಸೇವೆ ನಡೆದವು.