ಸದಾಶಿವನಗರದಲ್ಲಿರುವ ಐಐಎಸ್ ಸಿ ಕ್ಯಾಂಪಸ್ನಲ್ಲಿ ಬಿಗಿ ಭದ್ರತೆ ನಡುವೆಯೂ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿದ್ದ ನಿಗೂಢ ಕಳ್ಳತನವನ್ನು ಸೆಕ್ಯೂರಿಟಿ ಪತ್ತೆ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಜಿಯಾವುಲ್ಲಾ ಮಲ್ಲಿಕ್ ಎನ್ನುವಾತ ಸೆಕ್ಯೂರಿಟಿ ಗಾರ್ಡ್ ಕೈಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ಯಶವಂತಪುರದಲ್ಲಿ ವಾಸವಿದ್ದ ಆರೋಪಿ ಜಿಯಾವುಲ್ಲಾ ಮಲ್ಲಿಕ್, ರಸ್ತೆಯಲ್ಲಿ ಸಿಕ್ಕ ವಿದ್ಯಾರ್ಥಿಯೊಬ್ಬರ ಐಡಿ ಕಾರ್ಡ್ ಬಳಸಿಕೊಂಡು ಈ ಕೃತ್ಯ ಎಸಗುತ್ತಿದ್ದ. ಈಗ ಕ್ಯಾಂಪಸ್ನಲ್ಲಿ ಪದೇ ಪದೇ ನಡೆಯುತ್ತಿದ್ದ ಕಳ್ಳತನ ಪ್ರಕರಣಗಳಿಗೆ ಫುಲ್ ಸ್ಟಾಪ್ ಬಿದ್ದಿದೆ.
ರಸ್ತೆಯಲ್ಲಿ ಸಿಕ್ಕ ವಿದ್ಯಾರ್ಥಿ ಐಡಿ ಕಾರ್ಡ್ ಬಳಸಿಕೊಂಡು ಐಐಎಸ್ ಸಿ ಹಾಸ್ಟಲ್ನೊಳಗೆ ನುಸುಳುತ್ತಿದ್ದ. ಹಾಸ್ಟೆಲ್ ವಿದ್ಯಾರ್ಥಿಗಳ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುಕೊಂಡು ಹೋಗುತ್ತಿದ್ದ. ವಿದ್ಯಾರ್ಥಿ ವೇಷದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ. ಐಐಎಸ್ ಸಿ ಬಾಯ್ಸ್ ಹಾಸ್ಟೆಲ್ ನಲ್ಲಿ ಲ್ಯಾಪ್ ಟಾಪ್, ಕ್ಯಾಮೆರಾ, ನಗದು ಹಣ, 200 ಯುಎಸ್ ಡಾಲರ್, 5 ಯೂರೋ ಸೇರಿ ಹಲವು ವಸ್ತುಗಳ ಕಳ್ಳತನ ಮಾಡಿದ್ದ.
ಎಂಟೆಕ್ ವಿದ್ಯಾರ್ಥಿ ಐಡಿ ಕಾರ್ಡ್ ಬಳಸಿಕೊಂಡು ಐಐಎಸ್ ಸಿ ಆವರಣದಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ ಖತರ್ನಾಕ್ ಕಳ್ಳ. ಈ ವೇಳೆ ಅನುಮಾನ ಬಂದು ಸೆಕ್ಯೂರಿಟಿ ಪ್ರಶ್ನೆ ಮಾಡಿದ್ದಾನೆ. ಆ ವೇಳೆ ಐಡಿ ಕಾರ್ಡ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆ ಜಿಯಾವುಲ್ಲಾ ಮಲ್ಲಿಕ್ ತಬ್ಬಿಬ್ಬಾಗಿದ್ದಾನೆ. ಬಳಿಕ ಸೆಕ್ಯೂರಿಟಿ ಮತ್ತು ಸೂಪರ್ ವೈಸರ್ ಗಳು ವಿಚಾರಿಸಿದಾಗ ಕಳ್ಳತನಕ್ಕೆ ಬಂದಿರುವ ಗೊತ್ತಾಗಿದೆ. ಬಳಿಕ ಐಐಎಸ್ ಸಿ ಅಧಿಕಾರಿಗಳು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಜಿಯಾವುಲ್ಲಾ ಮಲ್ಲಿಕ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.