ನಮ್ಮ ಸಾಲವನ್ನು ಸಿಎಂ ಸಿದ್ದರಾಮಯ್ಯ ಮನ್ನಾ ಮಾಡುತ್ತಾರೆ, ನಾವು ಸಾಲ ಮರುಪಾವತಿ ಮಾಡಲ್ಲ. ನೀವು ಸಾಲದ ಕಂತು ಕೇಳಿಕೊಂಡು ಪದೇ ಪದೇ ಮನೆಗಳ ಬಳಿ ಬರಬೇಡಿ ಎಂದು ಸಾಲ ವಸೂಲಿಗೆ ಬಂದಿದ್ದ ಕ್ಯಾಲನೂರು ಸೊಸೈಟಿ ಸಿಬ್ಬಂದಿ ವಿರುದ್ಧ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೋಲಾರ ತಾಲ್ಲೂಕಿನ ಕ್ಯಾಲನೂರು ಗ್ರಾಮದಲ್ಲಿ ನಡೆದಿದೆ.
ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರು ವೇಮಗಲ್ ನಡೆದ ಸ್ತ್ರೀ ಶಕ್ತಿ ಮಹಿಳಾ ಸಮಾವೇಶದಲ್ಲಿ ಭಾಷಣದಲ್ಲಿ ಹೇಳಿದ್ದರು. ನಿಮ್ಮ ಸಂಘಗಳ ಸಾಲದ ಕಂತುಗಳನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು ಎಂದ ಮಹಿಳೆಯರು.
ಸಿದ್ದರಾಮಯ್ಯ ಅವರು ಇನ್ನೂ ಕೆಲವೇ ದಿನಗಳಲ್ಲಿ ನಮ್ಮ ಸಂಘಗಳ ಸಾಲ ಮನ್ನಾ ಮಾಡುತ್ತಾರೆ, ನೀವ್ಯಾಕೆ ಸಾಲ ಮರುಪಾವತಿಗೆ ಒತ್ತಡ ಹಾಕುವಿರಿ, ಸಾಲಮನ್ನಾ ಮಾಡುವವರೆಗೆ ಸಾಲ ವಸೂಲಾತಿಗೆ ನಮ್ಮ ಮನೆ ಬಾಗಿಲಿಗೆ ಬರಬೇಡಿ ಎಂದು ಸೊಸೈಟಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,