
ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸಂಭವಿಸಿವೆ.
ಮದುವೆ ಸಂಬಂಧಗಳು ಕೂಡಿಬರುತ್ತಿಲ್ಲ ಎಂಬ ಹತಾಶೆಯಿಂದ ರಾಜ್ಯದ ಇಬ್ಬರು ಯುವಕರು ನೇಣಿಗೆ ಶರಣಾಗಿದ್ದಾರೆ. ಚಿಕ್ಕಮಗಳೂರಿನ ಕಡೂರಿನಲ್ಲಿ ಶಿರಾ ಮೂಲದ ಕುಮಾರ್ (26) ಹಾಗೂ ವಿಜಯಪುರದ ನಿಡಗುಂದಿಯಲ್ಲಿ ಶಂಕರ್ ತಳವಾರ್ (25) ಎಂಬುವವರು ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ.
ಪೋಷಕರು ಎಷ್ಟು ಹುಡುಕಿದರೂ ಸಂಬಂಧಗಳು ನಿಶ್ಚಯವಾಗದಿದ್ದಕ್ಕೆ ಮನನೊಂದ ಇಬ್ಬರು ಯುವಕರು ಮರಕ್ಕೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ…
ಘಟನೆ 1: ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಕುಮಾರ್ (26). ಸಾವು. ಈತ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ನಿವಾಸಿ.
ವಿವರ: ವೃತ್ತಿಯಲ್ಲಿ ಕುರಿಗಾಹಿಯಾಗಿದ್ದ ಕುಮಾರ್ಗೆ ಪೋಷಕರು ಕಳೆದ ಕೆಲವು ದಿನಗಳಿಂದ ಹೆಣ್ಣು ಹುಡುಕುತ್ತಿದ್ದರು. ಆದರೆ ಸತತ ಪ್ರಯತ್ನದ ಹೊರತಾಗಿಯೂ ಯಾವುದೇ ಸಂಬಂಧಗಳು ಕುದುರುತ್ತಿರಲಿಲ್ಲ. ಇದರಿಂದ ಮಾನಸಿಕವಾಗಿ ಕುಗ್ಗಿದ್ದ ಕುಮಾರ್, ಕಡೂರು ತಾಲೂಕಿನ ಬೋರಗಾನಹಳ್ಳಿ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ 2: ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ಶಂಕರ್ ತಳವಾರ್ (25) ಸಾವು. ನಿಡಗುಂದಿ ತಾಲೂಕಿನ ಚಿಮ್ಮಲಗಿ ಗ್ರಾಮದ ನಿವಾಸಿ.
ವಿವರ: ಶಂಕರ್ಗೆ ಎರಡು ವರ್ಷಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು, ಆದರೆ ಕಾರಣಾಂತರಗಳಿಂದ ಆ ಸಂಬಂಧ ಮುರಿದುಬಿದ್ದಿತ್ತು. ಆನಂತರ ಎಷ್ಟೇ ಹುಡುಕಿದರೂ ಮದುವೆಗೆ ಹೆಣ್ಣು ಸಿಗುತ್ತಿರಲಿಲ್ಲ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಈತ ಕುರಿ ಮೇಯಿಸಲು ಹೋದ ಸಂದರ್ಭದಲ್ಲಿ ಜಮೀನಿನ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.