ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ದಾರುಣ ಸಾವು

ಆಟವಾಡುತ್ತಾ ಈಜಲು ಹೋದ ನಾಲ್ವರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿಂದು ನಡೆದಿದೆ.

ಕಿರಣ (6), ಶರತ್ (6),‌ಹಣಮೇಶ್ (7), ಬಸಮ್ಮ (11) ಮೃತಪಟ್ಟ ದುರ್ದೈವಿಗಳು.

ಈ ಘಟನೆಯಿಂದ ಇಡೀ ಗ್ರಾಮವೇ ಕಣ್ಣೀರಿನಲ್ಲಿ ಮುಳುಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಶಾಲೆಗೆ ರಜೆ ಇದ್ದ ಕಾರಣ ಗ್ರಾಮದ ಮಕ್ಕಳು ಸಂಭ್ರಮದಿಂದ ಆಟವಾಡುತ್ತಾ ಸಮೀಪದ ಜಮೀನಿನಲ್ಲಿದ್ದ ಕೃಷಿ ಹೊಂಡದ ಬಳಿ ತೆರಳಿದ್ದಾರೆ. ಹೊಂಡದ ಆಳದ ಅರಿವಿಲ್ಲದ ಮಕ್ಕಳು ಈಜಲು ನೀರಿಗೆ ಇಳಿದಿದ್ದಾರೆ. ಈ ವೇಳೆ ಒಬ್ಬ ಮಗು ನೀರಿನಲ್ಲಿ ಮುಳುಗುವುದನ್ನು ಕಂಡು, ಆತನನ್ನು ರಕ್ಷಿಸಲು ಹೋದ ಉಳಿದ ಮೂವರು ಕೂಡ ಒಬ್ಬರ ಹಿಂದೆ ಒಬ್ಬರಂತೆ ನೀರಿನ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸುರಪುರ ಡಿವೈಎಸ್‌ಪಿ ಜಾವೇದ್ ಇನಾಮ್ದಾರ್, ಕೆಂಭಾವಿ ಪೊಲೀಸ್ ಠಾಣೆಯ ಪಿಎಸ್‌ಐ ಹಣಮಂತ್ರಾಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ನಗನೂರು ಗ್ರಾಮದಲ್ಲಿ ಈಗ ನೀರವ ಮೌನ ಆವರಿಸಿದ್ದು, ಅಕಾಲಿಕವಾಗಿ ಮೃತಪಟ್ಟ ಮಕ್ಕಳ ನೆನಪಿನಲ್ಲಿ ಪ್ರತಿ ಮನೆಯೂ ಸೂತಕದ ಛಾಯೆಯಲ್ಲಿ ಮುಳುಗಿದೆ.

Leave a Reply

Your email address will not be published. Required fields are marked *

error: Content is protected !!