
ನಾಳೆ (ಭಾನುವಾರ) ನಡೆಯಬೇಕಿದ್ದ ಶ್ರೀರಾಮ ಶೋಭಾಯಾತ್ರೆ ಆಚರಣೆಗೆ ಡಿಜೆ ಬಳಕೆ ಅನುಮತಿ ವಿಚಾರದಲ್ಲಿ ಪೊಲೀಸ್ ಇಲಾಖೆ ಮತ್ತು ಆಯೋಜಕರಾದ ಬಜರಂಗದಳ ವಿಹಿಂಪ ಮಧ್ಯೆ ಹೈಡ್ರಾಮ ನಡೆಯಿತು.
ಡಿಜೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಬಜರಂಗದಳ ವಿಹಿಂಪ ಕಾರ್ಯಕರ್ತರು ಮಧ್ಯಾಹ್ನದಿಂದ ಪ್ರತಿಭಟನೆ ನಡೆಸಿದರು. ಕೊನೆಗೆ ಶಾಸಕ ಧೀರಜ್ ಮುನಿರಾಜು, ಹಿರಿಯ ಮುಖಂಡ ಕೆ.ಎಂ ಹನುಮಂತರಾಯಪ್ಪ ಸಮ್ಮುಖದಲ್ಲಿ ಡಿವೈಎಸ್ಪಿ ಪಾಂಡುರಂಗ, ಇನ್ಸ್ಪೆಕ್ಟರ್ ಅಮರೇಶ್ ಗೌಡ ಮತ್ತು ಬಜರಂಗದಳ ವಿಹಿಂಪ ಮುಖಂಡರಾದ ನರೇಶ್ ರೆಡ್ಡಿ, ಭಾಸ್ಕರ್, ರವಿ ಮಧ್ಯೆ ನಡೆದ ಮಾತುಕತೆಯಲ್ಲಿ ಷರತ್ತುಬದ್ಧ ಅನುಮತಿಗೆ ಆಯೋಜಕರು ಒಪ್ಪಿಗೆ ಸೂಚಿಸಿದರು.
ಡಿವೈಎಸ್ಪಿ ಪಾಂಡುರಂಗ ಮಾತನಾಡಿ ಜಿಲ್ಲಾಧಿಕಾರಿಗಳ ಆದೇಶಾನುಸಾರ ಶೋಭಾಯಾತ್ರೆಯನ್ನು ಆಚರಣೆ ಮಾಡಬೇಕು ಎಂದು ತಿಳಿಸಿದರು. ಇದಕ್ಕೆ ಸಭೆಯಲ್ಲಿದ್ದ ಆಯೋಜಕರು ಶಾಸಕ ಧೀರಜ್ ಮುನಿರಾಜು ಜೊತೆ ಸಮಾಲೋಚನೆ ನಡೆಸಿದರು. ಭಾನುವಾರವೇ ಶೋಭಾಯಾತ್ರೆ ಆಚರಿಸಲು ಸಮ್ಮತಿ ಸೂಚಿಸಿದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ ಕಳೆದ 14 ವರ್ಷಗಳಿಂದ ಶೋಭಾಯಾತ್ರೆ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಈ ಬಾರಿಯೂ ಅಹಿಕತರ ಘಟನೆಗೆ ನಾವು ಆಸ್ಪದ ನೀಡುವುದಿಲ್ಲ ಎಂದು ಭರವಸೆ ನೀಡಿದರು.