ಇನ್ನೊಬ್ಬರ ಅಭಿಪ್ರಾಯ ಪಡೆದು ಬದುಕುವುದನ್ನು ಬಿಡಬೇಕು- ಖ್ಯಾತ ಮನಃಶಾಸ್ತ್ರಜ್ಞೆ ಮತ್ತು ಪ್ರೇರಕ ಭಾಷಣಗಾರ್ತಿ ಡಾ.ಪದ್ಮಾಕ್ಷಿ ಲೋಕೇಶ್

83% ರಷ್ಟು ಮನಷ್ಯ ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾನೆ. ಇದರಿಂದ ವಿಧವಿಧ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ.. ಮನಸ್ಸು, ದೇಹವನ್ನು ಹತೋಟಿಯಲ್ಲಿಟ್ಟುಕೊಂಡರೆ ಉತ್ತಮ. ಆದ್ದರಿಂದ ಊಟವನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು. ಸಮಾಧಾನವಾಗಿ ನೀರನ್ನು ಕುಡಿಯಬೇಕು. ನೆಮ್ಮದಿಯಾಗಿ ನಿದ್ರೆ ಮಾಡಬೇಕು. ಇನ್ನೊಬ್ಬರ ಅಭಿಪ್ರಾಯ ಪಡೆದು ಬದುಕುವುದನ್ನು ಬಿಡಬೇಕು ಎಂದು ಖ್ಯಾತ ಮನಃಶಾಸ್ತ್ರಜ್ಞೆ ಮತ್ತು ಪ್ರೇರಕ ಭಾಷಣಗಾರ್ತಿ ಡಾ.ಪದ್ಮಾಕ್ಷಿ ಲೋಕೇಶ್ ಹೇಳಿದರು..

ತಾಲ್ಲೂಕು ವಕೀಲರ ಸಂಘದಿಂದ ನಗರದ ಕೋರ್ಟ್ ಆವರಣದಲ್ಲಿಂದು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿತ್ತು… ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಒತ್ತಡ ಇರುತ್ತದೆ. ಇದರ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು…

4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಿರ್ಮಲಾ. ಕೆ ಅವರು ಮಾತನಾಡಿ, ಸಮಾಜದಲ್ಲಿ ಸಮಾನತೆ ಅತಿ ಮುಖ್ಯ. ಸಮಾಜಮುಖಿಯಾಗಿ ಎಲ್ಲರು ಕೆಲಸ ಮಾಡಬೇಕು. ಮಹಿಳೆಗೆ ಎಲ್ಲಕ್ಕಿಂತ ಮಿಗಿಲಾಗಿ ಆತ್ಮಗೌರವವಿರಬೇಕು.. ಸಮಾಜದಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಣಬೇಕು. ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದರು..

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೆಚ್.ಎ. ಶಿಲ್ಪಾ ಅವರು ಮಾತನಾಡಿ, ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಾಗಿರುತ್ತದೆ. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಮತ್ತು ನ್ಯಾಯಾಂಗದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಬೇಕು ಎಂದರು.

ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಪ್ರೀತಿ. ಕೆ ಅವರು ಮಾತನಾಡಿ, ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರದೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಇತರೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿದ್ದಾರೆ. ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವಿಸಲು ಹಾಗೂ ಇತರರಿಗೆ ಮಾದರಿಯಾಗಲು ಈ ಮಹಿಳಾ ದಿನಾಚರಣೆ ತುಂಬಾ ಸಹಕಾರಿಯಾಗಿದೆ ಎಂದು ಹೇಳಿದರು…

ಈ ವೇಳೆ 1ನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್. ಆರ್.ಜೆ.ಎಸ್, ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ದಾಸರಿ ಕ್ರಾಂತಿ ಕಿರಣ್, 2ನೇ ಸಿವಿಲ್ ನ್ಯಾಯಾಧೀಶರಾದ ರವಿ ಬೇಟೆಗಾರ ಸೇರಿದಂತೆ ಸಂಘದ ಪದಾಧಿಕಾರಿಗಳು, ವಕೀಲರು ಸೇರಿದಂತೆ ಇತರರು ಉಪಸ್ಥಿತರಿದ್ದರು…

Leave a Reply

Your email address will not be published. Required fields are marked *

error: Content is protected !!