
ಕೋಲಾರ: ಮುಸಲ್ಮಾನರ ಪವಿತ್ರ ರಂಜಾನ್ ಹಬ್ಬವನ್ನು ಕೋಲಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮದಿಂದ ಶನಿವಾರ ಆಚರಣೆ ಮಾಡಲಾಯಿತು.
ನಗರದ ಈದ್ಗಾ ಮೈದಾನ ಹಾಗೂ ಚಿಕ್ಕಬಳ್ಳಾಪುರ ರಸ್ತೆಯ ಸಂಗೊಂಡಹಳ್ಳಿ ಬಳಿಯ ದರ್ಗಾ ಸಮೀಪ ಆಯೋಜಿಸಿದ್ದ ವಿಶೇಷ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಆಹಮದ್, ಶಾಸಕ ಕೊತ್ತೂರು ಮಂಜುನಾಥ್ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು
ಹಬ್ಬದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದಲೂ ಸಿದ್ಧತೆಗಳು ಜೋರಾಗಿ ನಡೆದಿದ್ದವು. ದರ್ಗಾಗಳಿಗೆ ದೀಪಾಲಂಕಾರಗಳನ್ನು ಮಾಡಲಾಗಿತ್ತು. ಹೊಸ ಬಟ್ಟೆಗಳನ್ನು ತೊಟ್ಟು ಕುಟುಂಬ ಸಮೇತರಾಗಿ ಪ್ರಾರ್ಥನೆಗಳಿಗೆ ಆಗಮಿಸಿದ ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಣೆಯಲ್ಲಿ ತೊಡಗಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪ್ರಾರ್ಥನೆಯಲ್ಲಿ ಉತ್ತಮ ಮಳೆ, ಬೆಳೆಗಾಗಿ ಅಲ್ಲಾಹುವಿನಲ್ಲಿ ಬೇಡಿಕೊಳ್ಳಲಾಯಿತು. ಪ್ರಾರ್ಥನೆ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಅಂತೆಯೇ ಬಡವರಿಗೆ ಹಣ ಸೇರಿದಂತೆ ಇನ್ನಿತರೆ ವಸ್ತುಗಳನ್ನು ದಾನವಾಗಿ ನೀಡಲಾಯಿತು.
ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆಗೆ ವ್ಯವಸ್ಥೆ ಕಲ್ಪಿಸಿದ್ದು, ಪ್ರತಿ ವರ್ಷದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರಿಂದಾಗಿ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಕ್ಲಾಕ್ ಟವರ್ನಿಂದ ಬೈಪಾಸ್ವರೆಗಿನ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ, ಟೇಕಲ್ ಮಾರ್ಗದಲ್ಲಿ ಸಾಗಲು ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಶಾಂತಿಯುತವಾಗಿ ಹಬ್ಬ ಆಚರಣೆಗೊಂಡಿತು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು, ಸಮಿತಿ ಪದಾಧಿಕಾರಿಗಳು, ಸೇರಿದಂತೆ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಆಫ್ಸರ್, ಮೈಲಾಂಡಹಳ್ಳಿ ಮುರಳಿ, ಅಬ್ದುಲ್ ಖಯ್ಯಾಮ್, ಸಾಧಿಕ್, ಫೈರೋಜ್ ಖಾನ್, ಏಜಾಜ್, ಶಫಿ, ಕುರಿಗಳ ರಮೇಶ್, ನೂರ್ ಮುಂತಾದವರು ಇದ್ದರು.