
ಬಿಸಿಲಿನ ತಾಪ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರದ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಸಂಜೆ ವರ್ಷದ ಮೊದಲ ಮಳೆ ಸುರಿಯಿತು.
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಹಿನ್ನೆಲೆ ಇಂದು ರಾಜ್ಯದ ಹಲವು ಭಾಗಗಳಲ್ಲಿ ಆಲಿಕಲ್ಲು, ಗುಡುಗು, ಮಿಂಚು ಸಹಿತ ಮಳೆ ಆಗಿದೆ. ಕಳೆದ ಕೆಲವು ದಿನಗಳಿಂದ ವಾತಾವರಣದಲ್ಲಿ ಏರಿಕೆಯಾಗಿದ್ದ ಉಷ್ಣಾಂಶವು ಹದವಾದ ಮಳೆಗೆ ತಂಪಾಯಿತು.

ಮಂಗಳವಾರ ಸಂಜೆ ದಿಢೀರ್ ಸುರಿದ ಮಳೆಯಿಂದ ಜನ ಹರ್ಷಗೊಂಡರು. ಕೆಲವರು ಮಳೆಯಲ್ಲಿ ನೆನೆದರೆ, ಹಲವರು ಮಳೆಯಿಂದ ಮಳೆ ಹನಿಗಳಿಂದ ತಪ್ಪಿಸಿಕೊಳ್ಳಲು ಸೂರು ಹುಡುಕಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಬಿದ್ದಿರುವ ಮಳೆಯು ರೈತರಲ್ಲಿ ಹರ್ಷ ತರಿಸಿದೆ. ಮುಂಗಾರು ಪೂರ್ವದ ಮಳೆಯ ಆರ್ಭಟ ತುಸು ಜೋರಾಗಿಯೇ ಇತ್ತು. ಗುಡುಗು, ಮಿಂಚುಗಳ ಜತೆಗೆ ಆರ್ಭಟಿಸಿದ ಸಿಡಿಲುಗಳಿಂದ ಮಕ್ಕಳು ಬೆದರಿದರು.

ತುಂತುರು ಮಳೆಗೆ ನೆನೆದ ಭೂಮಿಯ ಮಣ್ಣಿನ ಸುವಾಸನೆ ಮೂಗನ್ನು ಪುಳಕಗೊಳಿಸಿತು.