ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಕಾಮಕಾಂಡ ಬಯಲು: ದೂರು ನೀಡಲು ಬಂದ ಮಹಿಳೆಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಸಂಚು: ಸಂತ್ರಸ್ತೆಯ ಅಪ್ರಾಪ್ತ ಮಗಳಿಗೂ ಇನ್ಸ್‌ಪೆಕ್ಟರ್ ಬೆದರಿಕೆ ಆರೋಪ

ಕಾನೂನು ರಕ್ಷಕನೇ ಭಕ್ಷಕನಾದರೆ ಸಾಮಾನ್ಯ ಜನರ ಗತಿ ಏನು? ದೂರು ನೀಡಲು ಬಂದವರನ್ನೇ ಲೈಂಗಿಕವಾಗಿ ಬಳಸಿಕೊಳ್ಳುವ ಕಾಮುಕ ಪೊಲೀಸ್ ಅಧಿಕಾರಿಯೊಬ್ಬನ ಕರ್ಮಕಾಂಡ ಈಗ ಬಯಲಾಗಿದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು ಇಡೀ ಪೊಲೀಸ್ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿವೆ. ಕೌಟುಂಬಿಕ ವ್ಯಾಜ್ಯ ಅಥವಾ ದೂರು ನೀಡಲು ಬರುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಈತ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಸಂತ್ರಸ್ತೆಯೊಬ್ಬಳ ಗಂಡನನ್ನು ಕೇಸ್‌ನಲ್ಲಿ ಸಿಲುಕಿಸಿ, ಆತನನ್ನು ಬಿಡುಗಡೆ ಮಾಡಲು ‘ನನ್ನ ಜೊತೆ ಮಲಗಬೇಕು ಅಥವಾ 25 ಲಕ್ಷ ರೂಪಾಯಿ ನೀಡಬೇಕು’ ಎಂದು ಇನ್ಸ್‌ಪೆಕ್ಟರ್ ಧಮಕಿ ಹಾಕಿರುವ ವಿಷಯ ಈಗ ಬೆಳಕಿಗೆ ಬಂದಿದೆ. ನಾನು ಪೋಸ್ಟಿಂಗ್‌ಗಾಗಿ ಗೃಹಸಚಿವರಿಗೆ 50 ಲಕ್ಷ ನೀಡಿ ಬಂದಿದ್ದೇನೆ ಎಂದು ಈತ ಅಹಂಕಾರದಿಂದ ಹೇಳಿಕೊಂಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಇನ್ನೊಂದು ಕರಾಳವಾದ ಅಂಶವೆಂದರೆ, ಈ ಇನ್ಸ್‌ಪೆಕ್ಟರ್‌ ತಾನು ಲೈಂಗಿಕವಾಗಿ ಬಳಸಿಕೊಂಡ ಮಹಿಳೆಯೊಬ್ಬರ ಅಪ್ರಾಪ್ತ ಮಗಳ ಮೇಲೂ ಕಾಮದೃಷ್ಟಿ ಬೀರಿದ್ದಾರೆ. ತನ್ನ ತೀಟೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಕಣ್ಣುಹಾಕಿದ್ದಲ್ಲದೆ, ಆಕೆ ಓದುತ್ತಿರುವ ಕಾಲೇಜಿಗೆ ಹೋಗುತ್ತೇನೆ ಎಂದು ಫೋನ್‌ನಲ್ಲಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾನೆ. ಈ ಆರೋಪಕ್ಕೆ ಸಂಬಂಧಿಸಿದ ಆಡಿಯೋವೊಂದು ಈಗ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಈತನ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪವಿತ್ತು. ಹಿರಿಯ ಅಧಿಕಾರಿಗಳೇ ಈತನನ್ನು ರಕ್ಷಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ಪ್ರಕರಣದ ತೀವ್ರತೆ ಅರಿತ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತನಿಖೆಗೆ ಆದೇಶಿಸಿದ್ದಾರೆ. ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಅವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.

ಈವರೆಗೂ ಯಾವೊಬ್ಬ ಮಹಿಳೆಯೂ ಅಧಿಕೃತವಾಗಿ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿಲ್ಲ. ಯಾರಾದರೂ ಸಂತ್ರಸ್ತೆಯರಿದ್ದರೆ ಧೈರ್ಯವಾಗಿ ಬಂದು ದೂರು ನೀಡಿ, ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕಮಿಷನರ್ ಮನವಿ ಮಾಡಿದ್ದಾರೆ. ಆದರೆ ಮತ್ತೊಂದೆಡೆ, ಈಗಾಗಲೇ ಸಿಎಂ, ಗೃಹ ಸಚಿವರು ಮತ್ತು ಮಹಿಳಾ ಆಯೋಗಕ್ಕೂ ದೂರು ನೀಡಿದ್ದೇನೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದು, ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!