ತೂಬಗೆರೆಯ ದೊಡ್ಡಮ್ಮ ದೇವಾಲಯದಲ್ಲಿ ಕಳ್ಳತನ: ಹುಂಡಿ, ತಾಳಿ, ಆಭರಣ ಕಳವು

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದ ದೊಡ್ಡಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ಬೆಳಿಗ್ಗೆ ದೇವಾಲಯದ ಬಾಗಿಲಿನ ಬೀಗ ಮುರಿದಿರುವುದು ಬೆಳಕಿಗೆ ಬಂದಿದ್ದು, ಒಳನುಗ್ಗಿದ ದುಷ್ಕರ್ಮಿಗಳು ಹುಂಡಿ ಹಾಗೂ ದೇವಿಯ ತಾಲಿ ಆಭರಣವನ್ನು ಕದ್ದೊಯ್ದಿರುವುದು ತಿಳಿದುಬಂದಿದೆ.

ಜನವಸತಿ ಪ್ರದೇಶದಲ್ಲೇ ಇರುವ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮಾಹಿತಿ ತಿಳಿದ ಕೂಡಲೇ ಸಂಬಂಧಿತ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚೆಗೆ ಗ್ರಾಮದಲ್ಲಿ ಅಪರಿಚಿತ ವಲಸೆ ಕಾರ್ಮಿಕರ ಸಂಚಾರ ಹೆಚ್ಚಾಗಿರುವುದು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಹಾವಳಿ ಕಂಡುಬರುತ್ತಿರುವುದರಿಂದ ಗ್ರಾಮಸ್ಥರಲ್ಲಿ ಭದ್ರತೆ ಕುರಿತ ಆತಂಕ ಮತ್ತಷ್ಟು ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆ ಗ್ರಾಮಾಂತರ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಬಲಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!