
ಸಿದ್ದಾಪುರ: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಿನ್ ಮಠ ಕ್ರಾಸ್ ಬಳಿ ಜಲ್ಲಿ ತುಂಬಿದ ಲಾರಿಯೊಂದು ರಸ್ತೆಗೆ ಉರುಳಿದ ಪರಿಣಾಮ, ಟ್ಯಾಂಕ್ನಿಂದ ಡೀಸೆಲ್ ಸೋರಿಕೆಯಾಗಿ ವಾಹನ ಸಂಚಾರಕ್ಕೆ ಅಡ್ಡಿಯಾದ ಘಟನೆ ನಡೆದಿದೆ.
ಲಾರಿ ಬಿದ್ದ ರಭಸಕ್ಕೆ ಟ್ಯಾಂಕ್ನಲ್ಲಿದ್ದ ಡೀಸೆಲ್ ರಸ್ತೆಯ ಮೇಲೆಲ್ಲಾ ಚೆಲ್ಲಿದ್ದರಿಂದ ರಸ್ತೆ ಜಾರುವಂತಾಗಿತ್ತು. ಇದರಿಂದ ದ್ವಿಚಕ್ರ ವಾಹನಗಳು ಸ್ಕಿಡ್ ಆಗುವ ಹಾಗೂ ಇತರೆ ವಾಹನಗಳಿಗೆ ಅಪಘಾತ ಸಂಭವಿಸುವ ಆತಂಕ ಎದುರಾಗಿತ್ತು.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ 112 ತುರ್ತು ವಾಹನ ಚಾಲಕರಾದ ಅರುಣ ರಾವಳ ಹಾಗೂ ವಿನಾಯಕ್ ಎಲ್ ಅವರು, ಸಂಭಾವ್ಯ ಅನಾಹುತ ತಪ್ಪಿಸಲು ಕೂಡಲೇ ಕಾರ್ಯಪ್ರವೃತ್ತರಾದರು. ರಸ್ತೆಗೆ ಮಣ್ಣು ಮತ್ತು ನೀರನ್ನು ಸಿಂಪಡಿಸಿ, ಜಾರುತ್ತಿದ್ದ ರಸ್ತೆಯನ್ನು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವಾಹನ ಸವಾರರ ಹಿತದೃಷ್ಟಿಯಿಂದ 112 ಸಿಬ್ಬಂದಿ ತೋರಿದ ಈ ಸಮಯಪ್ರಜ್ಞೆ ಮತ್ತು ತ್ವರಿತ ಕಾರ್ಯಚರಣೆಯನ್ನು ಇಲಾಖೆ ಹಾಗೂ ಸಾರ್ವಜನಿಕರು ಶ್ಲಾಘಿಸಿ, ಅಭಿನಂದಿಸಿದ್ದಾರೆ.