
ನೆಲಮಂಗಲದ ಜಿಂದಾಲ್ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಕಳೆದ ರಾತ್ರಿ 12 ಗಂಟೆಯ ಸುಮಾರಿಗೆ ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಕಾ ಕಾರು, ಬೆಂಗಳೂರಿನಿಂದ ಹೊರಟಿದ್ದ KSRTC ಬಸ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ, ಕಾರಿನಲ್ಲಿದ್ದ ಎಲ್ಲಾ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೇಗವಾಗಿ ಬರುತ್ತಿದ್ದ ಕಾರು ಹೆದ್ದಾರಿಯ ಡಿವೈಡರ್ ಹಾರಿ ಬಸ್ಗೆ ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮೃತ ದುರ್ದೈವಿಗಳನ್ನು ದೊಡ್ಡಬಳ್ಳಾಪುರದ ಬಸವ ಭವನ ಸಮೀಪದ ನಿವಾಸಿ ಲಲಿತ್, ತಿಪ್ಪಾಪುರದ ಹರ್ಷಿತ್ ಸಿ, ದೇವರಾಜ ನಗರದ ದುರ್ಗಾಪ್ರಸಾದ್, ಕರೇನಹಳ್ಳಿ ಧನುಷ್, ಕಲ್ ಪೇಟೆ ನಿವಾಸಿ ಕೇಶವ್ ಎಂ ಎಂದು ಗುರುತಿಸಲಾಗಿದೆ…

ಮೃತ ಹರ್ಷಿತ್ ರಾಜನಕುಂಟೆ ಸಾಯಿ ವಿದ್ಯಾ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ದ್ವಿತೀಯ ವರ್ಷದ ಡಿಗ್ರಿ ಓದುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಕಾರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತನೂ ಪ್ರಾಣ ಬಿಟ್ಟಿದ್ದಾನೆ.

ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಐವರ ಮೃತದೇಹ ರವಾನೆ ಮಾಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
