ಬೆಂಗಳೂರು ಗ್ರಾಮಾಂತರ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾಗಿ ಮಂಜುನಾಥ್ ಕೆ.ವಿ ನೇಮಕ

ಬೆಂಗಳೂರು:ಬೆಂಗಳೂರು ಗ್ರಾಮಾಂತರ ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ಅಧ್ಯಕ್ಷರಾಗಿ ಮಂಜುನಾಥ್ ಕೆ.ವಿ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ನೇಮಕಾತಿ ಆದೇಶ ಹೊರಡಿಸಿದ್ದು, ಈ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷವನ್ನು ಸಂಘಟಿಸಿ ಬಲಿಷ್ಠಗೊಳಿಸುವ ಜವಾಬ್ದಾರಿಯನ್ನು ಮಂಜುನಾಥ್ ಕೆ.ವಿ ಅವರು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವನ್ನು ಹೆಚ್.ಡಿ. ದೇವೇಗೌಡ ಅವರು ವ್ಯಕ್ತಪಡಿಸಿದ್ದಾರೆ.

ನೂತನ ಅಧ್ಯಕ್ಷರಿಗೆ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಶುಭಾಶಯಗಳನ್ನು ಸಲ್ಲಿಸಿದ್ದಾರೆ.

ಬೆಂಗಳೂರು: ಪಕ್ಷದ ತತ್ವ–ಸಿದ್ಧಾಂತಗಳಿಗೆ ನಿಷ್ಠರಾಗಿರುವ, ಸಹಕಾರಿ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಶ್ರೀ ಮಂಜುನಾಥ್ ಕೆ.ವಿ., ಮುಂದಿನ ದಿನಗಳಲ್ಲಿ ಗ್ರಾಮಾಂತರ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸುವ ವಿಶ್ವಾಸವನ್ನು ಪಕ್ಷದ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

ರೈತ ಕುಟುಂಬದ ಹಿನ್ನೆಲೆಯಿರುವ ಶ್ರೀ ಮಂಜುನಾಥ್ ಕೆ.ವಿ. ಅವರು ದೇವನಹಳ್ಳಿ ಎಪಿಎಂಸಿ ಅಧ್ಯಕ್ಷರಾಗಿ ಹಾಗೂ ಬಿದಲೂರು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ, ರೈತರು, ಗ್ರಾಮಾಂತರ ಜನತೆ ಮತ್ತು ಸಹಕಾರಿ ವಲಯದಲ್ಲಿ ಜನಪರ ಆಡಳಿತದ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಪಾರದರ್ಶಕತೆ, ಶಿಸ್ತು ಮತ್ತು ಸೇವಾಭಾವನೆ ಇವರ ಕಾರ್ಯಶೈಲಿಯ ಪ್ರಮುಖ ಲಕ್ಷಣಗಳಾಗಿವೆ.

ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ ಅರಿವು ಹೊಂದಿರುವ ಅವರು, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಜೊತೆಗೆ ಯುವಕರು, ರೈತರು ಹಾಗೂ ಮಹಿಳೆಯರನ್ನು ಜೆಡಿಎಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

ಗ್ರಾಮಾಂತರ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಕಾರ್ಯಕರ್ತರೊಂದಿಗೆ ನಿರಂತರ ಸಂವಾದ ನಡೆಸಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಪರಿಣಾಮಕಾರಿ ನಾಯಕತ್ವವನ್ನು ಅವರು ನೀಡಲಿದ್ದಾರೆ ಎಂದು ಪಕ್ಷದ ಯುವ ಮುಖಂಡ ಉದಯ ಆರಾಧ್ಯ ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!