
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಪ್ರೇಮ್ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಶ್ವೇತಾ ಮುರುಳೀಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನ ಮುಖಂಡರುಗಳು, ಕಾರ್ಯಕರ್ತರು ಅಭಿನಂದಿಸಿದರು.
ನೂತನ ಅಧ್ಯಕ್ಷ ಪ್ರೇಮ್ ಕುಮಾರ್ ಮಾತನಾಡಿ, ನಮ್ಮ ಪಟ್ಟಣ ಪಂಚಾಯತಿ ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಇವೆ. ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ ಕೈಗಾರಿಕಾ ಸ್ನೇಹಿಯಾಗಿ ಹೆಚ್ಚಿನ ಆದಾಯ ಕ್ರೋಢೀಕರಣಕ್ಕೆ ಒತ್ತು ನೀಡಲಾಗುತ್ತದೆ. ಎಲ್ಲಾ ವಾರ್ಡ್ ಗಳಲ್ಲಿ ಪ್ರಥಮ ಆದ್ಯತೆಯಾಗಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಲಾಗುವುದು. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದರು.

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಸಾರ್ವತ್ರಿಕ ಚುನಾವಣೆಯು 2025ರ ಡಿ.21ರಂದು ಮತದಾನ ನಡೆಯಿತು. ಡಿ.24ರಂದು ಫಲಿತಾಂಶ ಹೊರಬಂದಿತ್ತು. ಬುಧವಾರ ಜ.28ರಂದು ಅಧ್ಯಕ್ಷ ಸ್ಥಾನ (ಎಸ್.ಟಿ ಮೀಸಲು) ಉಪಾಧ್ಯಕ್ಷ ಸ್ಥಾನಕ್ಕೆ (ಸಾಮಾನ್ಯ) ಚುನಾವಣೆ ಪ್ರಕ್ರಿಯೆ ನಡೆಯಿತು.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 19 ವಾರ್ಡ್ ಗಳಲ್ಲಿ ಬಿಜೆಪಿ 14ರಲ್ಲಿ ಜಯಗಳಿಸಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗಳಿಂದ ತಲಾ ಒಂದೊಂದೆ ನಾಮಪತ್ರ ಸಲ್ಲಿಕೆಯಾಗಿತ್ತು.
ಚುನಾವಣೆ ಅಧಿಕಾರಿಯಾಗಿ ತಹಶಿಲ್ದಾರ್ ಮಲ್ಲಪ್ಪ.ಕೆ.ಯರಗೋಳ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಧೀರಜ್ ಮುನಿರಾಜು, ಬಮುಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್, ಬಿಜೆಪಿ ನಗರ ಅಧ್ಯಕ್ಷ ಮುದ್ದಪ್ಪ, ಗ್ರಾಮಾಂತರ ಅಧ್ಯಕ್ಷ ನಾಗೇಶ್, ತಾಲೂಕು ವಾಲ್ಮೀಕಿ ಸಮಾಜ ಅಧ್ಯಕ್ಷ ಮುನಿಕೃಷ್ಣಪ್ಪ ಅಭಿನಂದಿಸಿದರು. ಮಾಜಿ ಅಧ್ಯಕ್ಷ ಕುಮಾರ್, ಸದಸ್ಯರಾದ ಮುನಿಕೃಷ್ಣ, ಮಧುಕುಮಾರ, ಸೇರಿದಂತೆ ಹಲವರು ಅಭಿನಂದಿಸಿದರು.