
ಮುರ್ಡೇಶ್ವರ: ಸೈಬರ್ ವಂಚಕರು ಪಂಚಾಯತ್ ಕಾರ್ಯದರ್ಶಿಯೊಬ್ಬರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ, ಅವರ ಎಲೆಕ್ಟ್ರಾನಿಕ್ ರುಜುವಾತುಗಳನ್ನು (Credential) ಬಳಸಿ ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಹಣವನ್ನು ಲಪಟಾಯಿಸಿದ ಘಟನೆ ಭಟ್ಕಳ ತಾಲೂಕಿನಲ್ಲಿ ನಡೆದಿದೆ.
ವಂಚನೆಗೆ ಒಳಗಾದವರು ಭಟ್ಕಳ ತಾಲೂಕಿನ ಗ್ರಾಮ ಪಂಚಾಯಿತಿಯೊಂದರಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಸರಕಾರಿ ನೌಕರರಾಗಿದ್ದಾರೆ. ಈ ಬಗ್ಗೆ ಅವರು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದಿನಾಂಕ 24-12-2025 ರಂದು ದೂರುದಾರರ ಎಸ್.ಬಿ.ಐ (SBI) ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದಂತೆ ತಲಾ 900 ರೂ. ನಂತೆ ಮೂರು ಬಾರಿ ಒಟ್ಟು 2,700 ರೂ. ಕಡಿತವಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಅವರು ಸೈಬರ್ ದೂರು ನೀಡಿದ್ದರಿಂದ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು (Freeze) ನಂತರ ದಿನಾಂಕ 26-12-2025 ರಂದು ಅವರು ಬ್ಯಾಂಕ್‌ಗೆ ತೆರಳಿ ತಮ್ಮ ಖಾತೆಯನ್ನು ಪುನಃ ಚಾಲನೆಗೊಳಿಸಿದ್ದರು (Unfreeze) ಆದರೆ ಅಂದು ಸಂಜೆ 7 ಗಂಟೆಯ ಸುಮಾರಿಗೆ ಹ್ಯಾಕರ್ಗಳು ತಮ್ಮ ಕೈಚಳಕ ತೋರಿಸಿದ್ದು, ಖಾತೆಯಲ್ಲಿದ್ದ ಹಣವನ್ನು ಹಂತ ಹಂತವಾಗಿ ಬೇರೆಡೆಗೆ ವರ್ಗಾಯಿಸಿಕೊಂಡಿದ್ದಾರೆ.
ಆರೋಪಿಗಳು ಮೊದಲ ಹಂತದಲ್ಲಿ 1.94 ಲಕ್ಷ, 1.95 ಲಕ್ಷ ಮತ್ತು 68 ಸಾವಿರ ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದಾರೆ. ತದನಂತರ ಖಾತೆಗೆ ಜಮೆಯಾದ ಹಣದಲ್ಲೂ 1.85 ಲಕ್ಷ ಮತ್ತು 1.58 ಲಕ್ಷ ರೂ.ಗಳನ್ನು ಎಗರಿಸಿದ್ದಾರೆ. ಹೀಗೆ ಒಟ್ಟಾರೆಯಾಗಿ ಖಾತೆಯಲ್ಲಿದ್ದ 8,02,700 ರೂ. ಹಣವನ್ನು ದೋಚಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳು ಕಂಪ್ಯೂಟರ್ ಸಾಧನಗಳನ್ನು ಬಳಸಿ, ಗ್ರಾಹಕರಂತೆಯೇ ನಟಿಸಿ ಈ ಕೃತ್ಯ ಎಸಗಿದ್ದಾರೆ.
ದೂರುದಾರರ ಹೇಳಿಕೆಯ ಮೇರೆಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ:
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಣ್ಣ ಮೊತ್ತದ ಅನುಮಾನಾಸ್ಪದ ವ್ಯವಹಾರ ಕಂಡುಬಂದರೂ ತಕ್ಷಣ ಬ್ಯಾಂಕ್ ಮತ್ತು ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ. ಪಾಸ್‌ವರ್ಡ್ ಮತ್ತು ಓಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.