
ಆತ ಎರಡು ಮದುವೆ ಆಗಿದ್ದನಂತೆ. ಆದರೆ ಸಂಸಾರದಲ್ಲಿ ಸಮಸ್ಯೆ ಇದೆ ಎಂದು ಮೂರನೇ ಹೆಣ್ಣಿನ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಂತೆ. ಆದರೆ ಆಕೆ ಈತನಿಂದ ಹಣ, ಒಡವೆ ಎಲ್ಲಾ ತೆಗೆದುಕೊಂಡು, ಕೊನೆಗೆ ಹಣ, ಒಡವೆ ಕೊಡಲ್ಲ ಎಂದು ಬೆದರಿಕೆ ಹಾಕಿದ್ದಳಂತೆ. ಅದಕ್ಕೆ ರೊಚ್ಚಿಗೆದ್ದ ವ್ಯಕ್ತಿ ಮಹಿಳೆಯನ್ನ ಕೊಂದು, ಎರಡು ದಿನದ ನಂತರ ಆತನೂ ನೇಣಿಗೆ ಶರಣಾಗಿದ್ದಾನೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ………
ಹೌದು ಹೀಗೆ ಮರಕ್ಕೆ ನೇಣು ಬಿಗಿದುಕೊಂಡಿರುವ ವ್ಯಕ್ತಿ, ಸ್ಥಳ ಪರಿಶೀಲನೆ ಮಾಡುತ್ತಿರುವ ಪೋಲೀಸರು, ಶವಾಗರದ ಮುಂದೆ ಕಾದು ಕುಳಿತಿರುವ ಕುಟುಂಬಸ್ಥರು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕೊಳೂರು ಗ್ರಾಮದಲ್ಲಿ. ಹೌದು ರಾತ್ರಿ ವೀರಭದ್ರಯ್ಯ (63) ಎಂಬ ವ್ಯಕ್ತಿ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. ಈತ ಇದೇ ತಿಂಗಳ 12 ರಂದು ನೆಲಮಂಗಲದ ದ್ರಾಕ್ಷಾಯಿಣಿ ಎಂಬ ಮಹಿಳೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿಯನ್ನ ಪತ್ತೆ ಹಚ್ಚಲು ಪೋಲೀಸರು ಬಲೆ ಬೀಸಿದ್ದರು. ಆದರೆ ಕೊಲೆ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇನ್ನೂ ಕೊಲೆ ಆರೋಪಿ ವೀರಭದ್ರಯ್ಯ ಮತ್ತು ಕೊಲೆಯಾದ ದ್ರಾಕ್ಷಾಯಣಿಗೆ ಅಕ್ರಮ ಸಂಬಂಧ ಇತ್ತಂತೆ. ವೀರಭದ್ರಯ್ಯ ನಿಗೆ ಈ ಮೊದಲೇ ಎರಡು ಮದುವೆ ಆಗಿತ್ತು. ಆದರೂ ಇಳಿ ವಯಸ್ಸಿನಲ್ಲಿ ಮೂರನೇ ಹೆಣ್ಣಿನ ಸಹವಾಸ ಮಾಡಿದ್ದ. ಈಕೆಗಾಗಿ ಲಕ್ಷಾಂತರ ರುಪಾಯಿ ಹಣವನ್ನು ಸಹ ನೀಡಿದ್ದ. ಜೊತೆಗೆ ಒಡವೆಗಳನ್ನೂ ಸಹ ಕೊಡಿಸಿದ್ದನಂತೆ. ಆದರೆ ಮಹಿಳೆಗೆ ಬೇರೊಬ್ಬ ವ್ಯಕ್ತಿಯ ಜೊತೆಯಲ್ಲಿ ಅಕ್ರಮ ಸಂಭಂದ ಇದೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ. ಇದೇ ವಿಚಾರಕ್ಕೆ ಗಲಾಟೆಯಾಗಿ ಹಣ ಮತ್ತು ಒಡವೆ ವಾಪಸ್ ಕೇಳಿದ್ದಾನೆ. ಆದರೆ ಆಕೆ ಈತನಿಗೆ ಕೊಲೆ ಬೆದರಿಕೆ ಹಾಕಿದ್ದಳಂತೆ.

ಕೊನೆ ಕೊನೆಯಲ್ಲಿ ಇಬ್ಬರ ನಡುವೆ ಮನಸ್ಥಾಪ ಹೆಚ್ಚಾಗಿ ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಆದರೆ ರಾತ್ರಿ 11 ಗಂಟೆಯ ನಂತರ ನೇಣಿಗೆ ಶರಣಾಗಿದ್ದಾನೆ. ಸ್ಥಳೀಯರು ಯಾರೋ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ದೊಡ್ಡಬಳ್ಳಾಪುರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

ಒಟ್ಟಾರೆ ಇಳಿ ವಯಸ್ಸಿನಲ್ಲಿ ಅಕ್ರಮ ಸಂಬಂಧದ ಮೋಹಕ್ಕೆ ಸಿಲುಕಿ ಈಗ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನೂ ಮೃತ ದೇಹವನ್ನು ಪೋಲೀಸರು ಕುಟುಂಬಸ್ಥರಿಗೆ ನೀಡಿ ತನಿಖೆ ಮುಂದುವರಿಸಿದ್ದಾರೆ.