ಒಂದು ವರ್ಷದೊಳಗೆ ಎತ್ತಿನಹೊಳೆ ನೀರು- ಸಚಿವ ಕೆ.ಎಚ್ ಮುನಿಯಪ್ಪ

ಎತ್ತಿನಹೊಳೆ ಯೋಜನೆ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು ಒಂದು ವರ್ಷದಲ್ಲಿ ಜಿಲ್ಲೆಗೆ ನೀರು ಹರಿಯುವ ವಿಶ್ವಾಸವಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

ದೇವನಹಳ್ಳಿ ತಾಲೂಕು ಪಂಚಾಯಿತಿ ಆವರಣದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ, ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಕೊಳವೆ ಬಾವಿಯ ಪಂಪು ಮೋಟರ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎತ್ತಿನಹೊಳೆ ಯೋಜನೆಗೆ ಇದ್ದಂತ ಅಡೆತಡೆ ಈಗ ಬಗೆಹರಿದಿದ್ದು ಕ್ಷಿಪ್ರ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಸುಮಾರು 250 ರಿಂದ 300 ಕಿ.ಮೀ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ತುಮಕೂರಿನ ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರದ ಸಾಸಲು ಹೋಬಳಿ ಬಳಿ ನೀರನ್ನು ಶೇಖರಣೆ ಮಾಡಲಾಗುತ್ತದೆ. ಅಲ್ಲಿಂದ ಕುಂದಾಣದ ಬಳಿ ನೀರು ಶೇಖರಣೆ ಆಗಲಿದೆ. ಅಲ್ಲಿಂದ ನೀರನ್ನು ಪಂಪ್ ಮಾಡಲಾಗುತ್ತದೆ ಎಂದರು‌.

ಎತ್ತಿನಹೊಳೆಯಲ್ಲಿ 20 ಟಿಎಂಸಿ ನೀರಿದೆ. ಕೆರೆಗಳಿಗೆ ಹರಿಸುವ ಮೊದಲು ಮನೆಗಳಿಗೆ ನೀರು ಕೊಡಬೇಕು, ಒಂದು ವರ್ಷದೊಳಗೆ ಈ ಭಾಗಕ್ಕೆ ನೀರು ತರುವ ವಿಶ್ವಾಸವಿದೆ ಎಂದರು.

*ರೈತರು ಭೂಮಿ ಮಾರಾಟ ಮಾಡಬೇಡಿ*

ಜಿಲ್ಲೆಯ ಈ ಭಾಗಕ್ಕೆ ಕೆ.ಸಿ ವ್ಯಾಲಿ,ಹೆಚ್ ಎನ್ ವ್ಯಾಲಿ, ಎತ್ತಿನಹೊಳೆ ನೀರು ಬರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಕೃಷಿ ಚಟುವಟಿಕೆ ಕೈಗೊಳ್ಳಲು ಸಹಾಯವಾಗಲಿದ್ದು ರೈತರು ಯಾರು ಕೂಡ ಭೂಮಿ ಮಾರಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ 1500 ನಿವೇಶನ ನೀಡುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಿವೇಶನ ಜೊತೆಗೆ 1000 ಮನೆ ಮಂಜೂರು ಮಾಡಲಾಗಿದೆ ಎಂದರು.

ಮನೆಗೆ ಒಬ್ಬರು ಉದ್ಯೋಗದಲ್ಲಿ ಇರಬೇಕು ಎಂಬುದು ನನ್ನ ಆದ್ಯತೆ, ಯುವಕ ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಕಲ್ಪಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಈಗಾಗಲೇ ಫಾಕ್ಸ್ ಖಾನ್ ಕಂಪನಿ ಜೊತೆ ಸಭೆ ಮಾಡಿದ್ದೇನೆ. ಅವರು 25000 ಉದ್ಯೋಗ ಅವಕಾಶ ಇದೆ ಎಂದು ತಿಳಿಸಿದ್ದಾರೆ. ಯುವ ಸಮೂಹಕ್ಕೆ ಒಳ್ಳೆಯ ಕೌಶಲ್ಯ ಭರಿತ ತರಬೇತಿ ಒದಗಿಸಿ ಉದ್ಯೋಗ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರಾಜಣ್ಣ ಮಾತನಾಡಿ ಕೆರೆಗಳಿಗೆ ಹೆಚ್.ಎನ್ ವ್ಯಾಲಿ, ಕೆಸಿ ವ್ಯಾಲಿ ನೀರು ಹರಿಸಿದ್ದರಿಂದ ಅಂತರ್ಜಲ ವೃದ್ಧಿ ಆಗಿದ್ದು ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿದೆ. ರೈತರ ಬದುಕನ್ನು ಹಸನಾಗಿಸಲು ರಾಜ್ಯ ಸರ್ಕಾರ ವಿವಿಧ ನಿಗಮ ಹಾಗೂ ಸಂಸ್ಥೆಗಳ ಮೂಲಕ ಹಲವಾರು ರೈತ ಪರ ಅಭಿವೃದ್ದಿ ಕಾರ್ಯಕ್ರಮ ಯೋಜನೆಗಳನ್ನು ಪರಿಚಯಿಸುತ್ತಾ ಬಂದಿದೆ. ಅದರಲ್ಲಿ ಗಂಗಾ ಕಲ್ಯಾಣ ಯೋಜನೆ ಕೂಡ ಒಂದು. ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

*5000 ಮಕ್ಕಳಿಗೆ ಉಚಿತ ತಟ್ಟೆ, ಲೋಟ ವಿತರಣೆ*

ದೇವನಹಳ್ಳಿ ತಾಲೂಕು ಇಒ ಶ್ರೀನಾಥ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ದೇವನಹಳ್ಳಿ ತಾಲ್ಲೂಕಿನ ಒಟ್ಟು 39 ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸಲಾಗಿದ್ದು ಪಂಪು ಮೋಟಾರ್ ಇಂದು ನೀಡಲಾಗಿದೆ.

ತಾಲ್ಲೂಕು ಪಂಚಾಯಿತಿಗೆ ಕ್ರಿಯಾ ಯೋಜನೆಯಡಿ ತಾಲ್ಲೂಕಿನ ಸರ್ಕಾರಿ ಶಾಲೆಯ ಸುಮಾರು 5 ಸಾವಿರ ಮಕ್ಕಳಿಗೆ ತಟ್ಟೆ ಮತ್ತು ಲೋಟವನ್ನು ವಿತರಣೆ ಮಾಡಲಾಗಿದೆ. ಇದರ ಜೊತೆಗೆ 15 ಅಂಗನವಾಡಿಗಳಿಗೆ ಪ್ಲೇ ಕಿಟ್ ಗಳನ್ನು ವಿತರಿಸಲಾಗಿದೆ. ಗ್ರಾಮೀಣ ಭಾಗದ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರು ಅಥವಾ ರೋಗಿಗಳು ಕುಳಿತುಕೊಳ್ಳಲು 3 ಸೀಟಿನ 66 ಆಸನಗಳನ್ನು ಇಂದು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಯಪ ಅಧ್ಯಕ್ಷರಾದ ಶಾಂತಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷರಾದ ಜಗನ್ನಾಥ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್, ದೇವನಹಳ್ಳಿ ಸಹಾಯಕ ಅಭಿಯಂತರರಾದ ವಿಕಾಸ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!