
ಡಿ.15 ರಂದು ಕಾಣೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸಾಧುಮಠ ಗ್ರಾಮದ ರಸ್ತೆ ಬದಿಯ ಮೋರಿಯೊಂದರ ಹಳ್ಳದಲ್ಲಿ ಬೈಕ್ ಸಮೇತ ಬಾಲಕನ ಶವ ಪತ್ತೆಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ನಿವಾಸಿ ನಿಶಾಂಕ್ ಎನ್ (15) ಮೃತ ಬಾಲಕನಾಗಿದ್ದು, ಈತ ಚಿಕ್ಕಬಳ್ಳಾಪುರ ನಗರದ ಬೆಸ್ಟ್ ಪಿಯುಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.
ಇಂದು ಸಾಧು ಮಠ ಗ್ರಾಮದ ರಸ್ತೆ ಬದಿಯ ಮೋರಿಯಲ್ಲಿ ಬಾಲಕನ ಮೃತದೇಹ ಕೊಳತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಬೈಕ್ ಸಹ ಹಳ್ಳದಲ್ಲಿ ಬಿದ್ದಿದೆ.

ಮಗನ ಸಾವಿನ ಸುದ್ದಿ ಕೇಳಿ ತಂದೆ ಹಾಗೂ ತಾಯಿ ಇಬ್ಬರೂ ಆಘಾತಕ್ಕೊಳಗಾಗಿದ್ದು, ಕಣ್ಣೀರು ಸುರಿಸುತ್ತಿದ್ದಾರೆ. ಇನ್ನು ಘಟನೆ ಬಗ್ಗೆ ಮಾತನಾಡಿರುವ ತಾಯಿ ಹಾಗೂ ತಂದೆ, ಡಿಸೆಂಬರ್ 15 ರಂದು ನನ್ನ ಮಗನಿಗೆ ಹುಷಾರ್ ಇಲ್ಲದ ಕಾರಣ ಕಾಲೇಜಿಗೆ ಹೋಗದೇ ಮನೆಯಲ್ಲಿ ಇದ್ದ. ಮಗನಿಗೆ ಸ್ನಾನ ಮಾಡಿಕೊ ಅಂತ ಹೇಳಿದೆ. ಅದಾದ್ಮೇಲೆ ಬೆಳಗ್ಗೆ 7:30 ಗಂಟೆಗೆ ಊರ ಒಳಗೆ ಹೋಗಿ ಬರ್ತೀನಿ ಅಂತ ಹೇಳಿ ಹೋದವನು ಸಂಜೆಯಾದರೂ ಮನೆಗೆ ಬರಲಿಲ್ಲ. ನಂತರ ಮಗನಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಅಂತ ಬಂತು.

ನಂತರ ಸ್ನೇಹಿತರನ್ನ ವಿಚಾರಣೆ ಮಾಡಿದೆವು ಹಾಗೂ ಸಂಬಂಧಿಕರ ಮನೆಯಲ್ಲಿ ಫೋನ್ ಮಾಡಿ ವಿಚಾರಿಸಲಾಗಿ ಅಲ್ಲಿಗೂ ಸಹ ಹೋಗಿರಲಿಲ್ಲ. ನಮಗೆ ನಮ್ಮ ಪಕ್ಕದ ಮನೆಯವರ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿದ್ದ ಅಂತ ತಿಳಿದು ಬಂತು. ಆದ್ದರಿಂದ ಕಾಣೆಯಾಗಿರುವ ನನ್ನ ಮಗನನ್ನ ಪತ್ತೆ ಮಾಡಿಕೊಡಬೇಕೆಂದು ಡಿ.16ರಂದು ಮಹಿಳಾ ಠಾಣೆಯಲ್ಲಿ ನಾವು ದೂರು ನೀಡಿದ್ದೆವು. ಆದರೆ ಇಂದು ನಮ್ಮ ಮಗ ಶವವಾಗಿ ಪತ್ತೆಯಾಗಿದ್ದಾನೆ. ಇದು ಅಪಘಾತ ಅಲ್ಲ, ಉದ್ದೇಶಪೂರ್ವಕವಾಗಿಯೇ ನಮ್ಮ ಮಗನನ್ನು ಯಾರೋ ಕೊಲೆ ಮಾಡಿರಬಹುದು ಎಂದು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ಅವರು ಘಟನಾ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಸಹ ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿದೆ. ಪೊಲೀಸರ ಸಂಪೂರ್ಣ ತನಿಖೆಯಿಂದ ಇದು ಅಪಘಾತವೋ ಇಲ್ಲ ಕೊಲೆಯೋ ಎಂಬುದು ತಿಳಿದು ಬರಬೇಕಿದೆ.